ಹೊನ್ನಾವರ: ವಿಧಾನಸಭಾ ಚುನಾವಣೆಗೆ ಐದು ತಿಂಗಳಿರುವಾಗಲೇ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳು ಟಿಕೇಟ್ ಖಚಿತಪಡಿಸಿಕೊಳ್ಳಲು ಹೈಕಮಾಂಡ್ ಮೊರೆ ಹೋಗುವ ಮೂಲಕ ಸ್ಪರ್ಧಾ ಕಣಕ್ಕೆ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಜಿಲ್ಲೆಯಲ್ಲಿ ಕಳೆದ ಬಾರಿ ಪರೇಶ ಮೇಸ್ತ ಸಾವಿನ ಪ್ರಕರಣದ ನಂತರ ಪಕ್ಷ ಹೀನಾಯ ಸೋಲನ್ನು ಅನುಭವಿಸಿ ಎರಡು ಸ್ಥಾನ ಆರಂಭದಲ್ಲಿ ಗೆದ್ದರೂ ನಂತರ ಯಲ್ಲಾಪುರ ಕ್ಷೇತ್ರದಿಂದ ಆಯ್ಕೆಯಾದ ಶಿವರಾಮ ಹೆಬ್ಬಾರ್ ಬಿಜೆಪಿಯತ್ತ ಮುಖ ಮಾಡಿದ ಪರಿಣಾಮ ಒಂದು ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತ್ತು. ಪರೇಶ ಮೇಸ್ತ ಪ್ರಕರಣದ ಸಿ.ಬಿ.ಐ. ನ್ಯಾಯಲಯಕ್ಕೆ ತನಿಖಾ ವರದಿಯನ್ನೆ ಈ ಬಾರಿ ಅಸ್ತ್ರವಾಗಿಸಿಕೊಂಡು ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನಗಳಿಸಿಕೊಳ್ಳುವ ಸಿದ್ದತೆಯಲ್ಲಿ ಕಾಂಗ್ರೇಸ್ ತೊಡಗಿದೆ. ಆರಂಭಿಕವಾಗಿ ಜಿಲ್ಲೆಯ ಎಲ್ಲೆಡೆಯು ಕಾಂಗ್ರೇಸ್ ಪಕ್ಷದಿಂದ ಟಿಕೇಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದರು, ಕುಮಟಾದಲ್ಲಿ ಹತ್ತಕ್ಕೂ ಹೆಚ್ಚಿನವರು ಟಿಕೇಟ್ ಗಿಟ್ಟಿಸಿಕೊಳ್ಳಲು ಮುಂದಾಗುತ್ತಿದ್ದಾರೆ.
ಕುಮಟಾ ಕ್ಷೇತ್ರದಿಂದ ಮಾಜಿ ಶಾಸಕಿ ಶಾರದಾ ಶೆಟ್ಟಿ, ಕಿಸಾನ್ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ, ಮಂಜುನಾಥ ನಾಯ್ಕ, ಕೃಷ್ಣ ಗೌಡ ಆರ್.ಎಚ್.ನಾಯ್ಕ, ಯಶೋಧರ ನಾಯ್ಕ, ಭಾಸ್ಕರ ಪಟಗಾರ, ಪ್ರದೀಪ ನಾಯ್ಕ, ರವಿ ಶೆಟ್ಟಿ ಕವಲಕ್ಕಿ, ರವಿಕುಮಾರ ಶೆಟ್ಟಿ ಸೇರಿದಂತೆ ಹಲವು ನಾಯಕರ ಹೆಸರು ಕೇಳಿಬರುತ್ತಿದೆ. ಕಳೆದ ಬಾರಿ ಶಾಸಕರಾಗಿದ್ದ ಮಾಜಿ ಶಾಸಕಿ ಶಾರದಾ ಶೆಟ್ಟಿ ಟಿಕೇಟ್ ಈ ಬಾರಿಯು ದೊರೆಯಲಿದೆ ಎಂದು ಆರಂಭದಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿ ಬಂದರೂ, ಚುನಾವಣೆ ಸಮಯದಲ್ಲಿ ಈ ಹೆಸರು ನೆಪಥ್ಯಕ್ಕೆ ಸೇರಿದೆ. ಪಕ್ಷ ನೀಡಿದ ಹಲವು ಟಾಸ್ಕಗಳಲ್ಲಿ ಹಿನ್ನಡೆ, ಪಕ್ಷದ ಕಾರ್ಯಕರ್ತರ ಕಡೆಗಣೆನೆ, ಕ್ಷೇತ್ರದ ಜನರು ಸಂಕಷ್ಟದಲ್ಲಿದ್ದಾಗ ಆಗಮಿಸದೇ ಇರುವುದು ಕೂಡಾ ಹಿನ್ನಡೆಗೆ ಕಾರಣ ಎನ್ನಲಾಗುತ್ತಿದೆ. ಇದರ ಜೊತೆಗೆ ಅಧಿಕಾರವಧಿಯ ಕೊನೆಯ ಒಂದು ವರ್ಷದಲ್ಲಿ ಪುತ್ರನ ಹಸ್ತಕ್ಷೇಪ ಮತ್ತು ಚುನಾವಣೆ ಸನಿಹದಲ್ಲಿ ಕಾರ್ಯಕರ್ತರನ್ನು ಒಡೆದು ಆಳುವ ನೀತಿ ಟಿಕೇಟ್ ಗಿಟ್ಟಿಸಿಕೊಳ್ಳಲು ಕಂಟಕವಾಗಲಿದೆ ಎಂದು ಪಕ್ಷದ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಈ ಮಧ್ಯೆ ಜಾತಿಯಾಧರಿಸಿ ಪಕ್ಷ ಟಿಕೇಟ್ ನೀಡಲು ಮುಂದಾದರೆ ಕಾಂಗ್ರೇಸ್ ಪಾಳಯದಲ್ಲಿ ಐವರಲ್ಲಿ ಒರ್ವರಿಗೆ ಅದೃಷ್ಟ ಒಲಿಯಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಕ್ಷೇತ್ರದಲ್ಲಿ ದೊಡ್ಡ ಸಮುದಾಯವಾದ ಬ್ರಾಹ್ಮಣ, ನಾಮಧಾರಿ, ಒಕ್ಕಲಿಗ ಸಮುದಾಯದವರಿಗೆ ನೀಡಬೇಕು ಎನ್ನುವ ಬೇಡಿಕೆ ಆರಂಭದಿಂದಲೂ ಇದ್ದು, ಈ ಬಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬ್ರಾಹ್ಮಣ ಸಮುದಾಯದಲ್ಲಿ ನೋಡುದಾದರೆ ಶಿವಾನಂದ ಹೆಗಡೆ ಓರ್ವರೆ ಇದ್ದು, ಕಿಸಾನ್ ಕಾಂಗ್ರೇಸ್ ಜಿಲ್ಲೆಯಲ್ಲಿ ಸಂಘಟಿಸಿದ್ದಾರೆ. ಎಲ್ಲಾ ಸಮಾಜದವರನ್ನು ಸಮಾನವಾಗಿ ನೋಡುತ್ತಿರುವ ಜೊತೆಗೆ, ಹವ್ಯಕ ಸಮುದಾಯದ ಹೆಚ್ಚಿನ ಮತ ಪಡೆದು ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ದಟ್ಟವಾಗಿದೆ. ಇನ್ನು ಒಕ್ಕಲಿಗ ಸಮುದಾಯ ಪರಿಗಣಿಸಿದರೆ ಮಾಜಿ ಜಿ.ಪಂ. ಸದಸ್ಯ ಕೃಷ್ಣ ಗೌಡ, ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಹೆಸರು ಕೇಳಿ ಬರುತ್ತಿದೆ. ಇವರನ್ನು ಪಕ್ಷ ಒಂದೊಮ್ಮೆ ಪರಿಗಣಿಸಿದರೆ, ಒಕ್ಕಲಿಗ ಮತಗಳು ಕ್ರೋಡಿಕರಣವಾಗುವ ಜೊತೆ ಶಾಸಕ ದಿನಕರ ಶೆಟ್ಟಿ ಗೆಲುವಿಗೆ ಪ್ರಮುಖ ಕಾರಣವಾಗುವ ಮತಗಳು ಕಾಂಗ್ರೇಸ್ ಪಕ್ಷದತ್ತ ಓಲಿಯುವ ಸಾಧ್ಯತೆಯು ಇದೆ.
ಇನ್ನು ನಾಮಧಾರಿ ಸಮುದಾಯದಿಂದ ನೋಡುದಾದರೆ ಮಂಜುನಾಥ ನಾಯ್ಕಮತ್ತು ಯಶೋಧರ ನಾಯ್ಕ, ಮಾಜಿ ಜಿಪಂ ಸದಸ್ಯ ರತ್ನಾಕರ ನಾಯ್ಕ ಹೆಸರು ಕೇಳಿ ಬರುತ್ತಿದೆ. ಪ್ರತಿ ಬಾರಿ ಶಿರಸಿ ಕ್ಷೇತ್ರದಿಂದ ಭೀಮಣ್ಣ ನಾಯ್ಕ ಸ್ಪರ್ಧಿಸಿ ಸೊಲನ್ನು ಅನುಭವಿಸುತ್ತಿದ್ದು, ಈ ಬಾರಿ ಕೋಕ್ ನೀಡಿ ಹೊಸ ಮುಖಕ್ಕೆ ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಅನಿವಾರ್ಯವಾಗಿ ಭಟ್ಕಳ ಅಥವಾ ಕುಮಟಾದಲ್ಲಿ ನಾಮಧಾರಿ ಸಮಾಜಕ್ಕೆ ಅವಕಾಶ ನೀಡಬೇಕಾಗಿದ್ದು, ಭಟ್ಕಳದಿಂದ ಮಾಜಿ ಶಾಸಕ ಮಂಕಾಳ ವೈದ್ಯ ಟಿಕೇಟ್ ಖಚಿತ ಎನ್ನಲಾಗುತ್ತಿದೆ. ಇದರಿಂದ ಅನಿವಾರ್ಯವಾಗಿ ಕುಮಟಾದಲ್ಲಿ ಅವಕಾಶ ನೀಡಬೇಕಿದ್ದು, ಇರ್ವರಲ್ಲಿ ಒರ್ವರಿಗೆ ಟಿಕೇಟ್ ಖಚಿತವಾಗಲಿದೆ. ಈಗಾಗಲೇ ಪಕ್ಷದಿಂದ ಆಕಾಂಕ್ಷಿಗಳ ಅರ್ಜಿ ಸ್ವೀಕರಿಸುತ್ತಿದ್ದು, ಎಲ್ಲರೂ ತಮ್ಮ ಬೆಂಬಲಿಗ ನಾಯಕರೊಂದಿಗೆ ತೆರಳಿ ಅರ್ಜಿ ಸಲ್ಲಿಸುತ್ತಿದ್ದಾರೆ. ಮುಂದಿನ ಮೂರು ತಿಂಗಳೊಳಗೆ ಟಿಕೇಟ್ ಹಂಚಿಕೆಯ ಸ್ಪಷ್ಟ ಚಿತ್ರಣ ದೊರೆಯಲಿದೆ.
ಹೈಕಮಾಂಡ್ ಮಟ್ಟದ ಲಾಬಿಯಲ್ಲಿ ಶಿವಾನಂದ, ಮಂಜುನಾಥ
ಕ್ಷೇತ್ರದಲ್ಲಿ ಮಾತ್ರವಲ್ಲದೆ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಎಲ್ಲರ ವಿಶ್ವಾಸ ಗಳಿಸುತ್ತಿರುವ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಈಗಾಗಲೇ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಪ್ರಮುಖರ ನಾಯಕರನ್ನು ಭೇಟಿಯಾಗಿದ್ದಾರೆ. ಕಿಸಾನ್ ಘಟಕದ ಪ್ರಮುಖರು ಭೇಟಿಯಾಗುತ್ತಿದ್ದಾರೆ. ಇನ್ನು ಮಂಜುನಾಥ ನಾಯ್ಕ, ಧಾರವಾಡ ಮೂಲದ ಮಾಜಿ ಸಚೀವರ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರನ್ನು ಭೇಟಿಯಾಗುತ್ತಿದ್ದು, ಕ್ಷೇತ್ರದಲ್ಲಿ ಪಕ್ಷ ಸಂಘಟಿಸುವAತೆ ಸಲಹೆ ನೀಡಿದ್ದಾರೆ. ಪಕ್ಷದಿಂದ ಯಾರಿಗೆ ಈ ಬಾರಿ ಟಿಕೇಟ್ ನೀಡಿದರೂ ಒಗ್ಗಟ್ಟಾಗಿರುವಂತೆ ಸೂಚಿಸಿದ್ದು, ಬಂಡಾಯದ ಬಿಸಿ ತಪ್ಪಲಿದೆಯಾ ಎನ್ನವುದು ಚುನಾವಣೆ ಘೋಷಣೆಯ ಬಳಿಕ ನಿರ್ಧಾರವಾಗಲಿದೆ.