ಯಲ್ಲಾಪುರ: ಅನುದಾನಿತ ಶಿಕ್ಷಕರಿಗೆ ಪಿಂಚಣಿ ಸೌಲಭ್ಯ ಒದಗಿಸಬೇಕು. ಶಿಕ್ಷಕರ ಪರ ಅನುಕಂಪ ಗೌರವ ಹೊಂದಿರುವ ಮುಖ್ಯಮಂತ್ರಿಗಳು ತಕ್ಷಣ ಈ ಕುರಿತು ಪರಿಹಾರ ನೀಡಬೇಕೆಂದು ಸಮಸ್ತ ಪಿಂಚಣಿ ವಂಚಿತ ಶಿಕ್ಷಕ ನೌಕರರ ಪರವಾಗಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಕರ ಪರವಾಗಿ ಮಾಧ್ಯಮಿಕ ಸಂಘದ ಉಪಾಧ್ಯಕ್ಷ ಎಂ.ರಾಜಶೇಖರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನ.12ರಂದು ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ ನಡೆಯುವ ಶಿರಸಿಯ ಜಿಲ್ಲೆಯಿಂದ ಪ್ರತಿಭಟನೆಯಲ್ಲಿ ಭಾಗವಹಿಸುವ ಶಿಕ್ಷಕರನ್ನು ಉದ್ದೇಶಿಸಿ ಇಲ್ಲಿ ಮಾತನಾಡಿದ ಅವರು, ಪ್ರತಿ ತಾಲೂಕಿನಿಂದ ಎಲ್ಲಾ ಪಿಂಚಣಿ ವಂಚಿತ ಶಿಕ್ಷಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಕಳೆದ ಮುವತ್ತಾರು ದಿನಗಳಿಂದಲೂ ಹೆಚ್ಚು ಕಾಲ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಅನುದಾನಿತ ಪಿಂಚಣಿ ವಂಚಿತ ಶಿಕ್ಷಕರ ಧರಣಿ ಸತ್ಯಾಗ್ರಹದಲ್ಲಿ ಈ ಶಿಕ್ಷಕರ ನೋವಿಗೆ ಸ್ಪಂದಿಸದೆ ಸರಕಾರ ಮಲತಾಯಿ ಧೋರಣೆ ತಾಳುತ್ತಿದೆ. ಪಿಂಚಣಿ ಎನ್ನುವುದು ಗೌರವಯುತವಾದ ಸಂಧ್ಯಾ ಕಾಲದ ಬದುಕಿನ ಆಸರೆ. ಆದರೆ ಇಡೀ ಸಮಾಜದ ಪ್ರತಿರೂಪವನ್ನು ತಯಾರಿಸುವ ಗುರಿ ಹೊಂದಿರುವ ಈ ಶಿಕ್ಷಕರು ಬೀದಿಯಲ್ಲಿ ನಿಂತು ನ್ಯಾಯಕ್ಕಾಗಿ ಮೊರೆ ಹೋಗುವ ಹಾಗೆ ಮಾಡಿದೆ ಎಂದು ಹೇಳಿದರು.
ಅನುದಾನಿತ ಶಾಲೆಯ ಶಿಕ್ಷಕರಿಂದ ಎಲ್ಲಾ ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಳ್ಳಲಾಗುತ್ತಿದೆ. ನಮ್ಮ ಹೋರಾಟದಲ್ಲಿ ನಮಗೆ ಈಗಾಗಲೇ ಬೆಂಬಲ ಸೂಚಿಸಿರುವಂತ ಎಲ್ಲ ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಶಾಸಕರು ಉಸ್ತುವಾರಿ ಮಂತ್ರಿಗಳನ್ನು ಈ ಸಂಬಂಧ ಸರ್ಕಾರವನ್ನು ಇನ್ನಷ್ಟು ಒತ್ತಾಯ ಮಾಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸುವ ಎಲ್ಲ ಶಿಕ್ಷಕರು ಕಡ್ಡಾಯವಾಗಿ ತಮ್ಮ ಗುರುತಿನ ಚೀಟಿಯನ್ನ ತೆಗೆದುಕೊಂಡು ಹೋಗಲು ಸೂಚಿಸಿದರು.
ಈ ಸಭೆಯಲ್ಲಿ ವಿಶ್ವದರ್ಶನ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಮುಕ್ತಾ ಶಂಕರ, ಹೋಲಿ ರೋಜರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ರೇಮಂಡ್ ಫರ್ನಾಂಡಿಸ್, ಸಹ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ಚಂದ್ರಶೇಖರ್ ಎಸ್.ಸಿ., ಮಾಧ್ಯಮಿಕ ನೌಕರ ಸಂಘದ ಅಧ್ಯಕ್ಷ ಎಂ.ಕೆ.ಭಟ್ಟ ಹಾಗೂ ಶಿಕ್ಷಕರಾದ ಜಗದೀಶ ಭಟ್ಟ, ವೆಂಕಟ್ರಮಣ ಭಟ್ಟ, ಅಂತೋನ ರೋಡ್ರಿಗಸ್, ಶ್ಯಾಮಲಾ ಕೆರೆಗೆದ್ದೆ, ಮಹೇಶ್ ನಾಯ್ಕ ರೋಟರಿ ಪ್ರೌಢಶಾಲೆಯ ಪ್ರದೀಪ ನಾಯಕ, ಬ್ರೀಸ್ಟಲ್ ಲೋಪೀಸ್, ಮಿಸ್ ಮಿಲ್ಲಾ ಉಪಸ್ಥಿತರಿದ್ದರು.