ಕುಮಟಾ: ವಿಧಾನಭಾ ಚುನಾವಣೆ ಸಮಯದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಸೈನಿಕರಂತೆ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾ ಮಹಿಳಾ ಮೋರ್ಚಾ ಪ್ರಭಾರಿ ರೇಣುಕಾ ನಾಗರಾಜ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ, ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ವಚ್ಛಭಾರತ ಯೋಜನೆಯಿಂದ ಅಗ್ನಿಪಥ ಯೋಜನೆಯವರೆಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು, ಅದರ ಕುರಿತು ಪ್ರತಿಯೊಬ್ಬರಿಗೂ ತಿಳಿಸಿ, ವ್ಯಾಪಕ ಪ್ರಚಾರ ಮಾಡುವ ಹೊಣೆ ನಮ್ಮ ಕಾರ್ಯಕರ್ತರ ಮೇಲಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಬಿಜೆಪಿಗೆ ಕಾರ್ಯಕರ್ತರೇ ಜೀವಾಳ. ಕಾರ್ಯಕರ್ತರ ಮೂಲಕ ಪಕ್ಷ ಸಂಘಟನೆಯಲ್ಲಿ ನಾವೆಲ್ಲರೂ ಸಕ್ರಿಯರಾಗಿ ತೊಡಗಿಕೊಳ್ಳಬೇಕು. ಕಳೆದ 3 ವರ್ಷಗಳಿಂದ ಸಂಘಟನೆಯ ಜವಾಬ್ದಾರಿ ತೆಗೆದುಕೊಂಡು ನಿರಂತರವಾಗಿ ಪಕ್ಷ ಸಂಘಟಿಸುವ ಕಾರ್ಯ ನಡೆಯುತ್ತಿದೆ. ಕೆಲ ದಿನಗಳಲ್ಲಿ ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾ ರಾಜ್ಯ ಸಮಾವೇಶ ನಡೆಯಲಿದ್ದು, ಜಿಲ್ಲೆಯಿಂದ ಕನಿಷ್ಠ 5 ಸಾವಿರ ಮಹಿಳೆಯರು ತೆರಳಬೇಕಿದೆ ಎಂದರು.
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶೋಭಾ ನಾಯ್ಕ ಮಾತನಾಡಿ, ಮಹಿಳೆಯರು ಸಂಸಾರದ ಜಂಜಾಟದ ನಡುವೆ ದೇಶ ಕಟ್ಟುವ ಕೈಂಕರ್ಯದಲ್ಲಿ ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆಯ ನಿಮಿತ್ತ 1500 ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಲಾಗಿದೆ. ಪ್ರತಿ ಬೂತ್ ಮಟ್ಟದಲ್ಲಿ 25 ಮಹಿಳೆಯರ ಗುಂಪು ರಚಿಸಬೇಕಿದ್ದು, ಕೋಟಿ ಕಂಠ ಗಾಯನದಲ್ಲಿ ಮಹಿಳಾ ಮೋರ್ಚಾ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮ ಯಶಸ್ಸಿಗೆ ಸಹಕಾರ ನೀಡಿದ್ದಾರೆ. ರಾಜ್ಯ ಘಟಕದ ಸೂಚನೆಯಂತೆ ನಾವೆಲ್ಲರೂ ಪಕ್ಷ ಸಂಘಟನೆಯ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಸಭೆಯಲ್ಲಿ ಶಿವಮೊಗ್ಗಾ ವಿಭಾಗ ಸಹ ಪ್ರಭಾರಿ ಎನ್.ಎಸ್.ಹೆಗಡೆ, ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ರೇಖಾ ಹೆಗಡೆ, ಜಿಲ್ಲಾ ಮಹಿಳಾ ಮೋರ್ಚಾ ಪ್ರಭಾರಿ ಅನುರಾಧಾ ನಾಯ್ಕ, ಕುಮಟಾ ಮಂಡಲ ಪ್ರಭಾರಿ ಶಿವಾನಿ ಶಾಂತಾರಾಮ, ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಜಿಲ್ಲಾ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಪುರಸಭಾ ಅಧ್ಯಕ್ಷೆ ಅನುರಾಧಾ ಬಾಳೇರಿ, ಮಹಿಳಾ ಮೋರ್ಚಾ ತಾಲೂಕಾಧ್ಯಕ್ಷೆ ಮೋಹಿನಿ ಗೌಡ, ಜಿಲ್ಲಾ ಪ್ರಮುಖ ನಾಗರಾಜ ನಾಯಕ ತೊರ್ಕೆ, ಸಿದ್ದಾಪುರ ಪ್ರಭಾರಿ ಕುಮಾರ ಮಾರ್ಕಾಂಡೆ ಸೇರಿದಂತೆ ಮತ್ತಿತರರು ಇದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾಲಾ ಹುಲ್ಸವಾರ ಸ್ವಾಗತಿಸಿದರು. ಚಂದ್ರಕಲಾ ಭಟ್ಟ ನಿರೂಪಿಸಿದರು. ಹೊಲನಗದ್ದೆ ಗ್ರಾ.ಪಂ ಸದಸ್ಯೆ ಅನುರಾಧಾ ಭಟ್ಟ ವಂದೆ ಮಾತರಂ ಗೀತೆ ಹಾಡಿದರು.