ಶಿರಸಿ: ರಾಜ್ಯ ಪರಿಸರ ಅರಣ್ಯ ಜೀವಿಶಾಸ್ತ್ರ ಇಲಾಖೆ ನೀಡುವ ರಾಜ್ಯ ಪರಿಸರ ಶ್ರೀ ಪ್ರಶಸ್ತಿಯನ್ನು ನ.14ರಂದು ಬೆಳಿಗ್ಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಗಸಾಲ ಬೊಮ್ಮನಳ್ಳಿ ಗ್ರಾಮ ಅರಣ್ಯ ಸಮಿತಿ (ವಿ.ಎಫ್.ಸಿ.)ಗೆ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿ ಒಂದು ಲಕ್ಷ ನಗದು, ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಅಂದು ಬೆಳಿಗ್ಗೆ 10 ಗಂಟೆಗೆ ಮಿನಿವಿಧಾನ ಸೌಧ (ತಹಶೀಲ್ದಾರ ಕಚೇರಿ) 3ನೇ ಮಹಡಿಯ ಸಭಾಂಗಣದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಅರಣ್ಯ ಪರಿಸರ ಅಧಿಕಾರಿಗಳು, ಪರಿಸರ ಅರಣ್ಯ ತಜ್ಞರು, ಗ್ರಾಮ ಅರಣ್ಯ ಸಮಿತಿಗಳು, ಭೈರುಂಬೆ, ಸದಾಶಿವಳ್ಳಿ ಪಂಚಾಯತಗಳ ಗಣ್ಯರು, ಅಗಸಾಲ ಬೊಮ್ಮನಳ್ಳಿ ಗ್ರಾಮ ಜನರು ಪಾಲ್ಗೊಳ್ಳಲಿದ್ದಾರೆ.
ರಾಜ್ಯದಲ್ಲೇ ಪರಿಸರ ಪ್ರಶಸ್ತಿ ಪಡೆದ ಗ್ರಾಮ ಅರಣ್ಯ ಸಮಿತಿ ಇದಾಗಿದೆ ಎಂಬ ಅಂಶವನ್ನು ಎತ್ತಿ ಹೇಳಲಾಗಿದೆ. ಕೈಲಾಸ ಗುಡ್ಡದ ರಕ್ಷಣೆಗೆ ಕಟಬದ್ಧವಾಗಿರುವ ವಿ.ಎಫ್.ಸಿ. ಹಲವು ಮೇಲ್ಪಂಕ್ತಿ ಕೆಲಸ ಸಾಧಿಸಿದೆ. ಸೋಲಾರ್ ಗ್ರಾಮ, ಬೆಟ್ಟ ಅಭಿವೃದ್ಧಿ, ವಿದ್ಯಾರ್ಥಿಗಳ ನದೀ ಪಾದಯಾತ್ರೆ, ಜೇನು ಸಾಕಣೆ, ಹಸಿರು ಆರೋಗ್ಯ ಶಿಬಿರಗಳು, ಫಲವೃಕ್ಷ ವನ, ಜಲ ಸಂವರ್ಧನೆ ಪರಿಸರ ಯಕ್ಷಗಾನ ಹೀಗೆ ಮಹಿಳೆಯರು, ವಿದ್ಯಾರ್ಥಿಗಳು, ರೈತರ ಸಹಭಾಗಿತ್ವದಲ್ಲಿ ಗ್ರಾಮ ಸುಸ್ಥಿರ ಅಭಿವೃದ್ಧಿಯ ಕನಸು ಸಾಕಾರ ಮಾಡಲು ಪ್ರಯತ್ನ ನಡೆಸುತ್ತಿದೆ. ರಾಷ್ಟ್ರಮಟ್ಟದ ಹಿರಿಯ ಸಾಮಾಜಿಕ ಕಾರ್ಯಕರ್ತರು, ಕೇಂದ್ರ ರಾಜ್ಯ ಅರಣ್ಯ ಇಲಾಖೆ ಮುಖ್ಯಸ್ಥರು ವಿ.ಎಫ್.ಸಿಗೆ ಭೇಟಿ ನೀಡಿದ್ದಾರೆ. ಯುವ ಕಾರ್ಯಕರ್ತರ ತಂಡ ಹೊಂದಿರುವ ವಿ.ಎಫ್.ಸಿ. ಪರಿಸರ ಪ್ರಶಸ್ತಿ ಪಡೆದ ಸಂಭ್ರಮದಲ್ಲಿದೆ. ಪರಿಸರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗ್ರಾಮೀಣ ಜನತೆ ಪಾಲ್ಗೊಳ್ಳಲು ವಿ.ಎಫ್.ಸಿಯ ಪ್ರಮುಖರಾದ ನಾಗರಾಜ ಭಟ್ ಬೊಮ್ಮನಳ್ಳಿ ಹಾಗೂ ವಿ.ಎಫ್.ಸಿ. ಮಾಜಿ ಅಧ್ಯಕ್ಷ ವಿಶ್ವನಾಥ ಬುಗಡಿಮನೆ ಆಹ್ವಾನ ನೀಡಿದ್ದಾರೆ.