ನವದೆಹಲಿ : ಬ್ಯಾಂಕ್‌ಗೆ ರೂ 11,000 ಕೋಟಿಗೂ ಹೆಚ್ಚು ವಂಚನೆ ಮಾಡಿ ಭಾರತದಿಂದ ಪರಾರಿಯಾಗಿರುವ ಗುಜರಾತ್‌ನ ವಜ್ರದ ಉದ್ಯಮಿ ನೀರವ್ ಮೋದಿ ಅವರನ್ನು ಯುಕೆಯಿಂದ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ದಟ್ಟವಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಸಂಬಂಧಿಸಿದ ಬೃಹತ್ ವಂಚನೆ ಪ್ರಕರಣದಲ್ಲಿ ವಿಚಾರಣೆ ಎದುರಿಸಲು ಭಾರತಕ್ಕೆ ವಾಪಸ್ ಕಳುಹಿಸುವುದರ ವಿರುದ್ಧ 51 ವರ್ಷದ ಮೋದಿ ಮನವಿ ಮಾಡಿದ್ದರು.
ಆದರೆ ಇಂದು ಲಂಡನ್ ಹೈಕೋರ್ಟ್‌ನಲ್ಲಿ ಅವರ ಮೇಲ್ಮನವಿಯನ್ನು ತಿರಸ್ಕರಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಮೇಲ್ಮನವಿಯನ್ನು ಆಲಿಸಿದ ಲಾರ್ಡ್ ಜಸ್ಟೀಸ್ ಜೆರೆಮಿ ಸ್ಟುವರ್ಟ್-ಸ್ಮಿತ್ ಮತ್ತು ನ್ಯಾಯಮೂರ್ತಿ ರಾಬರ್ಟ್ ಜೇ ಅವರು ಪರಾರಿಯಾಗಿರುವ ಉದ್ಯಮಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮತಿಸುವ ತೀರ್ಪು ನೀಡಿದರು.
ಸದ್ಯಕ್ಕೆ ಮಾರ್ಚ್ 2019 ರಲ್ಲಿ ಬಂಧಿಸಲ್ಪಟ್ಟ ನಂತರ ಅವರನ್ನು ಮೊದಲು ಇರಿಸಲಾಗಿದ್ದ ಲಂಡನ್ ಜೈಲಿನಲ್ಲೇ ಅವರು ಉಳಿಯಲಿದ್ದಾರೆ. ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ಎರಡಕ್ಕೂ ನೀರವ್ ಮೋದಿ ಬೇಕಾಗಿದ್ದಾರೆ.
ಕೃಪೆ: http://news13.in