ಸಿದ್ದಾಪುರ: ಮನುಷ್ಯನು ಕಟ್ಟಿಕೊಂಡಿರುವ ಒಂದು ಅದ್ಬುತ ಅನ್ವೇಷಣೆಯೇ ಭಾಷೆ, ನಮ್ಮಲ್ಲಿ ಶಬ್ದಗಳು ಕಡಿಮೆ ಇದ್ದಾಗ ಬೇರೆ ಭಾಷೆಗಳನ್ನು ಬಳಸಬೇಕು. ಅಷ್ಟೊಂದು ಅದ್ಬುತ ಶಬ್ದ ಭಂಡಾರ ನಮ್ಮ ಕನ್ನಡ ಭಾಷೆಯಲ್ಲಿದೆ. ಭಾಷೆ ಸತ್ತರೆ ನಮ್ಮ ಚರಿತ್ರೆಯೇ ಕಳೆದು ಹೋಗುತ್ತದೆ ಎಂದು ಲೇಖಕರು, ಉಪನ್ಯಾಸಕರಾದ ಡಾ.ಸರ್ಫ್ರಾಜ್ ಚಂದ್ರಗುತ್ತಿ ಹೇಳಿದರು.
ಅವರು ಜಿಲ್ಲಾ ಸಾಹಿತ್ಯ ಪರಿಷತ್ತ್ ತಾಲೂಕು ಘಟಕವು ಸರ್ಕಾರಿ ಪದವಿಪೂರ್ವ ಕಾಲೇಜು ಹಾಳದಕಟ್ಟದಲ್ಲಿ ನಡೆದ ಕನ್ನಡ ಕಾರ್ತಿಕ, ಅನುದಿನ- ಅನುಸ್ಪಂದನ ತಿಂಗಳಿಡಿ ಸಾಹಿತ್ಯದ ಪಯಣ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಇತರ ಭಾಷಿಗರಿಗಿರುವಂತೆ ನಮ್ಮವರಿಗೆ ಅಭಿಮಾನ ಕಡಿಮೆಯಾಗುತ್ತಿರುವುದು ವಿಷಾದನೀಯ. ಎಲ್ಲಾ ಭಾಷೆಗಳು ಬೇಕು ಆದರೆ ನಮ್ಮ ತನವನ್ನು, ಮಾತೃ ಭಾಷೆಯನ್ನು ಮರೆಯಬಾರದು ಎಂದರು.
ಪತ್ರಕರ್ತ ಸುರೇಶ ಮಡಿವಾಳ ಕಡಕೇರಿ ಮಾತನಾಡಿ, ಇಂದು ನಮ್ಮ ಜೀವನಕ್ಕೆ ಎಲ್ಲಾ ಭಾಷೆಗಳು ಅವಶ್ಯಕ. ಕಲಿಕೆ ಭಾಷೆಗಳು ತುತ್ತಿಗಾದರೆ, ಮಾತೃ ಭಾಷೆ ನಮ್ಮ ನಾಡು, ನುಡಿ ಸಂಸ್ಕೃತಿಯ ಸಂಕೇತ. ನಮ್ಮತನ. ನಮ್ಮ ಹೃದಯ. ಎಲ್ಲಿದ್ದರು ನಮ್ಮ ಭಾಷೆಯನ್ನು ಸಾಧ್ಯವಾದಷ್ಟು ಕಲಿಸಬೇಕು. ಏಳಿಗೆಗಾಗಿ ಶ್ರಮಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಬಿ.ಎಸ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಎಲ್.ವಿ.ಭಟ್, ಕಸಾಪದ ಕಾರ್ಯದರ್ಶಿಗಳಾದ ಅಣ್ಣಪ್ಪ ಶಿರಳಗಿ, ಪ್ರಶಾಂತ ಶೇಟ್ ವೇದಿಕೆಯಲ್ಲಿದ್ದರು. ವಿದ್ಯಾರ್ಥಿ ಸಿಂಚನಾ ಸಿ.ಎಚ್. ಮಾತನಾಡಿದರು. ಇದೇ ವೇಳೆ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂಕಲ್ಪ ಸೇವಾ ಟ್ರಸ್ಟ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಪ್ರಸ್ತಾವಿಕವಾಗಿ ಮಾತನಾಡಿದರು. ವಿಧ್ಯಾರ್ಥಿಗಳು ನಾಡಗೀತೆ ಹಾಡಿದರು. ಉಪನ್ಯಾಸಕ ರತ್ನಾಕರ ನಾಯ್ಕ ಸ್ವಾಗತಿಸಿದರು. ಕಸಾಪದ ಖಜಾಂಚಿ ಪಿ.ಬಿ.ಹೊಸೂರ ವಂದಿಸಿದರು. ಉಪನ್ಯಾಸಕ ರಾಮಕೃಷ್ಣ ಸಭಾಹಿತ ನಿರೂಪಿಸಿದರು.