ಕಾರವಾರ: ಭಟ್ಕಳದ ಲೈಟ್ ಹೌಸ್‌ನಲ್ಲಿ ನಿವೃತ್ತ ಸೈನಿಕರನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಿ, ಭದ್ರತಾ ವ್ಯವಸ್ಥೆಗೆ ಬಲ ನೀಡುವಂತೆ ಜಿಲ್ಲಾ ಬಿಜೆಪಿ ಮಾಜಿ ಸೈನಿಕರ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಶ್ರೀಕಾಂತ ನಾಯ್ಕ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ.
ಭಟ್ಕಳ ಬಂದರಿನ ಸುತ್ತಲಿನ ಸಂಪೂರ್ಣ ರಕ್ಷಣಾ ಮಾಹಿತಿಗಾಗಿ ಲೈಟ್ ಹೌಸ್‌ನಲ್ಲಿ ರಾಡಾರ್ ವ್ಯವಸ್ಥೆಯಿದ್ದು, ಇದರ ನಿರ್ವಹಣೆಯನ್ನು ಭಾರತೀಯ ಕೋಸ್ಟ್ಗಾರ್ಡ್ ಅಧೀನದಲ್ಲಿ ಬಿಇಎಲ್ ಮಾಡುತ್ತಿದೆ. ರಾಡಾರ್ ವ್ಯವಸ್ಥೆ ಲೈಟ್ ಹೌಸ್‌ನ ಒಳಗಡೆ ಇದ್ದು, ಲೈಟ್ ಹೌಸ್‌ನ ಸಂಪೂರ್ಣ ಜಾಗ ಅತಿಸೂಕ್ಷ್ಮ ಪ್ರದೇಶವಾಗಿದೆ. ಅದರ ಸಂಪೂರ್ಣ ಸೆಕ್ಯುರಿಟಿ ವ್ಯವಸ್ಥೆಗಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಮೂವರು ನಿವೃತ್ತ ಸೈನಿಕರನ್ನು ನಿಯೋಜಿಸಲಾಗಿತ್ತು. ಈಗಿರುವ ಲೈಟ್ ಹೌಸ್ ಮಿನಿಸ್ಟ್ರಿ ಆಫ್ ಶಿಪ್ಪಿಂಗ್‌ನ ಆಡಳಿತಕ್ಕೆ ಒಳಪಟ್ಟಿದ್ದು, ಭಟ್ಕಳ ಲೈಟ್ ಹೌಸ್‌ನಲ್ಲಿ ಅತಿಸೂಕ್ಷ್ಮ ಭದ್ರತಾ ವ್ಯವಸ್ಥೆಯನ್ನು ಕಾಯ್ದುಕೊಂಡು ಹೋಗಬೇಕಾದವರು, ಕಳೆದ ಒಂದೂವರೆ ತಿಂಗಳ ಹಿಂದೆ ಉತ್ತಮ ರಕ್ಷಣಾ ಕರ್ತವ್ಯ ಮಾಡಿಕೊಂಡು ಬಂದಿದ್ದಂತಹ ಮೂವರೂ ಮಾಜಿ ಸೈನಿಕರನ್ನು ಏಕಾಏಕಿ ಕೆಲಸದಿಂದ ತೆಗೆದಿದ್ದಾರೆ. ಅಲ್ಲದೇ, ಇಲ್ಲಿಯವರೆಗೆ ಯಾವುದೇ ಸೂಕ್ತ ರಕ್ಷಣಾ ಭದ್ರತೆಯ ಸಿಬ್ಬಂದಿಗಳನ್ನು ನಿಯೋಜಿಸದೇ ಭದ್ರತಾ ನಿರ್ಲಕ್ಷ್ಯ ಮಾಡುತ್ತಿರುವ ಗಂಭೀರ ವಿಷಯ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ಮಿನಿಸ್ಟ್ರಿ ಫಾರ್ ಶಿಪ್ಪಿಂಗ್‌ನ ಲೈಟ್ ಹೌಸ್‌ನ ಡೈರೆಕ್ಟರ್ (ಗೋವಾ) ಮತ್ತು ಭಾರತೀಯ ಕೋಸ್ಟ್ ಗಾರ್ಡ್ನ ಡೈರೆಕ್ಟರ್ ಮಧ್ಯದ ಸಮನ್ವಯ ಕೊರತೆಯಿಂದ ಇಂದು ಭಟ್ಕಳ ಲೈಟ್ ಹೌಸ್‌ನಲ್ಲಿರುವ ರಾಡಾರ್ ವ್ಯವಸ್ಥೆಯ ರಕ್ಷಣೆ ವಿಷಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅಷ್ಟೇ ಅಲ್ಲದೇ, ಯಾವುದೇ ರಕ್ಷಣಾ ಸಿಬ್ಬಂದಿ ಇಲ್ಲದಿದ್ದ ಈ ಸಮಯದಲ್ಲೂ ಸಹ ಲೈಟ್ ಹೌಸ್‌ನ ಮುಖ್ಯ ನಿರ್ವಾಹಕರು ಸಾರ್ವಜನಿಕರಿಂದ ಹಣ ಪಡೆದು ಲೈಟ್ ಹೌಸ್ ಒಳಗಡೆ ವೀಕ್ಷಣೆ ಮಾಡಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಮಾಡಿಕೊಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.
ಅಲ್ಲದೇ ನಿಯೋಜಿಸಲ್ಪಟ್ಟಿದ್ದ ಮಾಜಿ ಸೈನಿಕರನ್ನು ತೆಗೆದಿದ್ದು ಯಾವ ಕಾರಣಕ್ಕೆ ಎಂಬ ಬಗ್ಗೆ ಸೂಕ್ತ ತನಿಖೆ ಮಾಡಿ, ಭದ್ರತಾ ನಿರ್ಲಕ್ಷ್ಯಕ್ಕೆ ಅವಕಾಶ ಮಾಡಿಕೊಟ್ಟವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಲು ಸಂಬ0ಧಿಸಿದ ಇಲಾಖೆಗೆ ಸೂಚಿಸಬೇಕು ಹಾಗೂ ಕೂಡಲೇ ಪ್ರಸ್ತುತ ನಿವೃತ್ತ ಸೈನಿಕರನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.
ಭಟ್ಕಳದ ಲೈಟ್ ಹೌಸ್‌ನಲ್ಲಿ ಭದ್ರತೆಗೆ ನಿವೃತ್ತ ಸೈನಿಕರ ಪುನಃ ನಿಯೋಜನೆಗೆ ಒತ್ತಾಯ
