ಸಿದ್ದಾಪುರ: ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಾಲೂಕಿನಲ್ಲಿ ಹುಳಗಳ ಬಾಧೆಯಿರುವ ಬಿಳಗಿ, ಹೊಸಳ್ಳಿ, ಮುತ್ತಿಗೆ, ಬೇಡ್ಕಣಿ, ಮನಮನೆ ಗ್ರಾಮಗಳ ಭತ್ತದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಸಿದರು.
ತಾಲೂಕಿನಾದ್ಯಂತ ಭತ್ತದ ಬೆಳೆಗೆ ಕಂದುಜಿಗಿ ಹುಳದ ಬಾಧೆ (ಭತ್ತದ ಬೆಳೆಯ ರಸ ಹೀರುವ ಹುಳಗಳು) ತುಂಬಾ ಕಾಣಿಸಿಕೊಳ್ಳುತ್ತಿದೆ. ಇದರಿಂದ ಭತ್ತದ ಬೆಳೆ ಹಾನಿಯಾಗುತ್ತಿದ್ದು ರೈತರು ಸಂಕಷ್ಟ ಪಡುತ್ತಿರುವ ಬಗ್ಗೆ ಇಲಾಖೆಯ ಅಧಿಕಾರಿಗಳು ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಮಾಹಿತಿ ನೀಡಿದ ತಕ್ಷಣ, ಸಭಾಧ್ಯಕ್ಷರು ಸಂಬಂಧಪಟ್ಟ ಇಲಾಖೆಯ ಹಿರಿಯ ಉನ್ನತ ಅಧಿಕಾರಿಗಳೊಂದಿಗೆ ಹಾಗೂ ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿಗಳೊಂದಿಗೆ ಈ ಕುರಿತು ಮಾತನಾಡಿ, ಕಂದುಜಿಗಿ ಹುಳಗಳ ಬಾಧೆಯ ನಿವಾರಣೆಗಾಗಿ ತೆಗೆದು ಕೊಳ್ಳಬೇಕಾದ ಕ್ರಮಗಳ ಕುರಿತು ಭತ್ತದ ಪ್ರದೇಶಗಳನ್ನು ಸಮೀಕ್ಷೆ ಮಾಡಲು ತಿಳಿಸಿರುವುದರಿಂದ, ಸಭಾಧ್ಯಕ್ಷರ ಸೂಚನೆಯಂತೆ, ಮಂಗಳವಾರ ಸಂಬಂಧಪಟ್ಟ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಾಲೂಕಿನಲ್ಲಿ ಹುಳಗಳ ಬಾಧೆಯಿರುವ ಬಿಳಗಿ, ಹೊಸಳ್ಳಿ, ಮುತ್ತಿಗೆ, ಬೇಡ್ಕಣಿ, ಮನಮನೆ ಗ್ರಾಮಗಳ ಭತ್ತದ ಪ್ರದೇಶಗಳಿಗೆ ಭೇಟಿ ನೀಡಿದರು.
ಹತೋಟಿಗಾಗಿ 0.3 ಎಮ್‌ಎಲ್ ಇಮಿಡಾಕ್ಲೋಪ್ರಿಡ್ 17.8ಎಸ್.ಎಲ್ ಅಥವಾ 2.5ಎಮ್‌ಎಲ್ ಕ್ಲೋರೋಪೈರೀಪಾಸ್ 20ಇ.ಸಿ ಅಥವಾ 0.2 ಗ್ರಾಂ ಥಯೋಮಿಥಾಕ್ಸಾಮ್ 25 ಡಬ್ಲೂಜಿ ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವಂತೆ ಕ್ರಮಗಳನ್ನು ತಿಳಿಸಿ,ಕೀಟ ಬಾಧಿತ ಕ್ಷೇತ್ರದಲ್ಲಿ TRIFLUMEZOPYRIM (10%SE) ಎಂಬ ಔಷಧಿಯ ಸಿಂಪರಣೆ ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳುವುದರ ಮೂಲಕ ರೈತರಿಗೆ ಮಾಹಿತಿ ಕೊಡಲಾಯಿತು.