ಕಾರವಾರ: ಹಿಂದೂ ಎಂಬುದು ಅಶ್ಲೀಲ ಪದ ಎಂದು ಹೇಳಿಕೆ ನೀಡಿರುವ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ವಿರುದ್ಧ ಜಿಲ್ಲಾ ಬಿಜೆಪಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ. ಭಾರತೀಯ ದಂಡ ಸಂಹಿತೆಯಂತೆ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಸತೀಶ್ ಜಾರಕಿಹೊಳಿಯವರು ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಹಿಂದೂ ಎಂಬುದು ಪರ್ಶಿಯನ್ ಪದ. ಅದರ ಅರ್ಥ ಕೂಡ ಅಶ್ಲೀಲ ಎಂದಿದ್ದರು. ಇದರಿಂದಾಗಿ ಅಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದ್ದು, ಜವಾಬ್ದಾರಿ ಸ್ಥಾನದಲ್ಲಿರುವ ಜಾರಕಿಹೊಳಿಯವರು ಈ ರೀತಿ ಹೇಳಿರುವುದು ಸರಿಯಲ್ಲ ಎಂದು ಬಿಜೆಪಿಗರು ಖಂಡಿಸಿದರು. ಅಲ್ಲದೇ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನ ಕೂಗಿ ಆಕ್ರೋಶ ಹೊರಹಾಕಿದರು.
ಇನ್ನು ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಕಾಂಗ್ರೆಸ್ಸಿನವರದ್ದು ಹಿಂದೂ ವಿರೋಧಿ ಹೇಳಿಕೆಗಳು ಇದೇ ಮೊದಲೇನಲ್ಲ. ಈಗಿನ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಹಿಂದೂಗಳನ್ನ ಅವಮಾನ ಮಾಡಿಕೊಂಡೇ ಬಂದಿದ್ದು, ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಓರ್ವ ಹಿಂದುವಾಗಿ ಹಿಂದು ಪದ ಅಶ್ಲೀಲ ಅರ್ಥವನ್ನ ಹೊಂದಿದೆ ಎಂದು ಹೇಳಿಕೆ ನೀಡಿರುವುದು ಹಿಂದು ಸಮಾಜಕ್ಕೆ ಆಘಾತ ಉಂಟುಮಾಡಿದೆ. ಸತೀಶ್ ಹೇಳಿಕೆಗೆ ಕಾಂಗ್ರೆಸ್ ಮುಖಂಡರುಗಳು ಸಮರ್ಥನೆಯನ್ನ ನೀಡುತ್ತಿರುವುದು ಕಾಂಗ್ರೆಸ್‌ನವರ ಹೇಡಿತನವನ್ನ ತೋರಿಸುತ್ತಿದೆ. ಆ ಭಾಷೆ ಬೇರೆ ಈ ಭಾಷೆ ಬೇರೆ ಎಂದು ಅವರು ಬೇಕಾದರೆ ಬೇರೆ ದೇಶಕ್ಕೆ ಹೋಗಿ ಮಾತನಾಡಲಿ. ಭಾರತೀಯರ ಬಗ್ಗೆ, ಭಾರತ ದೇಶದ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದ್ದಾರೆ. ಹೇಗಾದರೂ ಮಾಡಿ ಕರ್ನಾಟಕದಲ್ಲಿ ತಮ್ಮ ಕಾಂಗ್ರೆಸ್ ಸರ್ಕಾರವನ್ನ ಅಧಿಕಾರಕ್ಕೆ ತರಲು ಕೆಲವರ ಓಲೈಕೆಗಾಗಿ ಈ ರೀತಿ ಹೇಳಿಕೆ ನೀಡುತ್ತಿರುವುದನ್ನು ಖಂಡಿತವಾಗಿ ದೇವರೂ ಕ್ಷಮಿಸಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ ಮನವಿ ಪತ್ರವನ್ನು ಓದಿ ಹೇಳಿದರು. ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ…!!
ಪ್ರತಿಭಟನೆಯ ನಡುವೆ ಕಾರ್ಯಕರ್ತರೊಬ್ಬರು ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಈ ವೇಳೆ ಕೆಲವರು ಈಗಿರುವುದು ಬಿಜೆಪಿ ಸರ್ಕಾರವೆಂಬುದು ಅರ್ಥವಾಗಿ ನಸುನಕ್ಕರೆ, ಇನ್ನೂ ಕೆಲವರು ಅದಕ್ಕೂ ಧಿಕ್ಕಾರ ಕೂಗಿ ಈಗಿನ ಸಕಾರ ಯಾವುದೆಂಬುದ ಗೊಂದಲಕ್ಕೆ ಹುಟ್ಟುಹಾಕಿದರು.