ಹೊನ್ನಾವರ: ಜೀವನದಲ್ಲಿ ಆರೋಗ್ಯ ಭಾಗ್ಯ ನಿಜವಾದ ಸಂಪತ್ತು. ನಾವು ಮೊದಲು ಆರೋಗ್ಯ ಸಂಪತ್ತನ್ನು ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು. ಆರೋಗ್ಯ ಚೆನ್ನಾಗಿದ್ದರೆ ಆರ್ಥಿಕ ಸಂಪತ್ತು ಗಳಿಸಬಹುದು ಎಂದು ಕೆಎಂಸಿಯ ಹಿರಿಯ ಹೃದಯ ವೈದ್ಯ ಡಾ.ನರಸಿಂಹ ಪೈ ಹೇಳಿದರು.
ಅವರು ನಗರದ ಜಿಎಸ್‌ಬಿ ಯುವವಾಹಿನಿ ತನ್ನ ಬೆಳ್ಳಿಹಬ್ಬದ ನಿಮಿತ್ತ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿ, ವಿಶೇಷವಾಗಿ ಹೃದಯದ ಆರೋಗ್ಯ ಮನುಷ್ಯರಿಗೆ ಅತೀಮುಖ್ಯ. ದೇಹ, ಮನಸ್ಸಿನ ಸಮಗ್ರ ವ್ಯವಹಾರಕ್ಕೆ ಹೃದಯದಿಂದ ಶುದ್ಧ ರಕ್ತ ಪೂರೈಕೆಯಾಗಬೇಕು. ಕಾಲಕಾಲಕ್ಕೆ ಆರೋಗ್ಯದ ತಪಾಸಣೆ ಮಾಡಿಸಿಕೊಳ್ಳಿ ಎಂದರು.
ದೊಡ್ಡ ಆಸ್ಪತ್ರೆಗಳಿಗೆ ಹೋಗುವುದು ಎಲ್ಲರಿಗೆ ಸಾಧ್ಯವಿಲ್ಲದ ಕಾರಣ ಆಸ್ಪತ್ರೆಯೇ ಜನರಿದ್ದಲ್ಲಿ ಆಗಮಿಸಿ ಚಿಕಿತ್ಸೆ ನಡೆಸುತ್ತದೆ. ಮಂಗಳೂರು ಕೆಎಂಸಿಯ ತಜ್ಞವೈದ್ಯರು ಶಿಬಿರ ನಡೆಸಿದ್ದಾರೆ. ಆರೋಗ್ಯದ ಅರಿವು ಮೂಡಿಸುವದರ ಜೊತೆ ತಪಾಸಣೆಯಿಂದ ಆರೋಗ್ಯ ಜಾಗೃತಿ ಮೂಡಿಸುವ ಶಿಬಿರ ಇದು. ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ, ಮಣಿಪಾಲ ಕಾರ್ಡು ಪಡೆದವರಿಗೆ ರಿಯಾಯಿತಿಯಲ್ಲಿ ಮಂಗಳೂರು ಕೆಎಂಸಿಯಲ್ಲಿ ಭರವಸೆಯ ಚಿಕಿತ್ಸೆ ನೀಡುತ್ತೇವೆ ಎಂದರು.
ಐಎ0ಎ ಪ್ರತಿನಿಧಿ ಡಾ.ಗೌತಮ ಬಳಕೂರ ಮಾತನಾಡಿ, ಆರೋಗ್ಯ ಕಾಳಜಿಯ ಮಹತ್ವವನ್ನು ತಿಳಿಸಿದರು. ಪತ್ರಕರ್ತ ಜಿ.ಯು.ಭಟ್ಟ, ಹೊನ್ನಾವರದಲ್ಲಿ ರಾಘವ ಬಾಳೇರಿಯವರಿಂದ ಆರಂಭಗೊಂಡು ಜಿಲ್ಲೆಯಾದ್ಯಂತ ವಿಸ್ತರಿಸಿದ ಜಿಎಸ್‌ಬಿ ಯುವವಾಹಿನಿ ಬಹುವಿಧದ ಸಮಾಜಸೇವೆಯಲ್ಲಿ ತೊಡಗಿಕೊಂಡು ಇತರ ಸಮಾಜಕ್ಕೆ ಮಾದರಿಯಾಗಿದೆ. ಡಾ.ನರಸಿಂಹ ಪೈ ಕಳೆದ 18 ವರ್ಷಗಳಿಂದ ಉತ್ತರಕನ್ನಡಕ್ಕೆ ಆಗಮಿಸುತ್ತ ಜಿಲ್ಲೆಯ ಹೃದಯ ರೋಗಿಗಳಿಗೆ ಚಿಕಿತ್ಸೆ ನೀಡಿ, ಅವರಿಗೆ ಮಂಗಳೂರು ಓಡಾಟ ತಪ್ಪಿಸಿದಲ್ಲದೇ ಜಿಲ್ಲೆಯ ಪ್ರೀತಿ ವಿಶ್ವಾಸ ಗಳಿಸಿದ ವೈದ್ಯರಾಗಿದ್ದಾರೆ. ಡಾ.ಗೌತಮ ಬಳಕೂರ ಉನ್ನತ ವೈದ್ಯಕೀಯ ಶಿಕ್ಷಣ ಪಡೆದು, ಹುಟ್ಟಿದ ಊರಿಗೆ ಬಂದು, ಬಳಕೂರು ಕುಟುಂಬದ ಎರಡು ತಲೆಮಾರುಗಳ ವೈದ್ಯಕೀಯ ಸೇವೆಯನ್ನು ಮುಂದುವರಿಸುವುತ್ತಿರುವುದಕ್ಕೆ ಅಭಿನಂದಿಸಿದರು.
ಜಿಲ್ಲಾ ಯುವವಾಹಿನಿ ಅಧ್ಯಕ್ಷ ರಾಘವ ಬಾಳೇರಿ ಉಪಸ್ಥಿತರಿದ್ದರು. ತಾಲೂಕಾ ಯುವವಾಹಿನಿ ಅಧ್ಯಕ್ಷ ಗಣಪತಿ ಕಾಮತ ಸ್ವಾಗತಿಸಿದರು. ಮಹಿಳಾ ವಾಹಿನಿ ಸದಸ್ಯರಾದ ಶ್ರೀಮತಿ ಗೌರಿ ನಾಯಕ, ಮತ್ತು ಸುಗುಣಾ ಕಾಮತ ಪ್ರಾರ್ಥಿಸಿದರು. ವಿಶ್ವನಾಥ ನಾಯಕ ನಿರೂಪಿಸಿದರು. ಮಂಗಳೂರು ಕೆಎಂಸಿಯ ಹತ್ತು ವಿಭಾಗಗಳ ಹದಿನಾಲ್ಕು ತಜ್ಞವೈದ್ಯರು ಆಗಮಿಸಿ, 250ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಿದರು. ಇದೇ ಸಂದರ್ಭದಲ್ಲಿ ಕುಮಟಾ ರಕ್ತನಿಧಿ, ಐಎಂಎ ಸಹಕಾರದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 35ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ಮಂಗಳೂರು ಕೆಎಂಸಿಯ ಮಾರ್ಕೆಟಿಂಗ್ ವಿಭಾಗದ ದರ್ಶನ ನಾಯಕ ಶಿಬಿರ ಸಂಯೋಜಿಸಿದರು.