ಶಿರಸಿ :ನಗರದ ಹೊರ ವಲಯದಲ್ಲಿರುವ ತೋಟಗಾರಿಕಾ ಕಾಲೇಜು ಎದುರಿನಲ್ಲಿ ರಿಕ್ಷಾ ಸೇರಿದಂತೆ ವಿವಿಧ ವಾಹನಗಳನ್ನು ರಸ್ತೆಗೆ ಅಡ್ಡ ನಿಲ್ಲಿಸುವ ಕಾರಣ ಅಪಘಾತಗಳು ಉಂಟಾಗುತ್ತಿದೆ.
ತೋಟಗಾರಿಕಾ ಕಾಲೇಜು ಮತ್ತು ಅರಣ್ಯ ಕಾಲೇಜು ಎದುರಿನಿಂದ ಕುಳವೆ ಗ್ರಾಮಕ್ಕೆ ತೆರಳುವ ರಸ್ತೆಯ ಕ್ರಾಸ್ ನಲ್ಲಿ ವಿವಿಧ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿದ್ದು, ಇದರಿಂದ ಈಗಾಗಲೇ ನಾಲ್ಕಾರು ಅಪಘಾತಗಳು ನಡೆದಿದೆ. ಆದರೂ ಸಹ ಎಚ್ಚೆತ್ತುಕೊಳ್ಳದ ಕೆಲ ರಿಕ್ಷಾ ಚಾಲಕರು ಉದ್ದೇಶ ಪೂರ್ವಕವಾಗಿ ರಸ್ತೆಯ ಮೇಲೆ ವಾಹನ ನಿಲ್ಲಿಸುತ್ತಿದ್ದಾರೆ.
ಕುಳವೆ ಕ್ರಾಸ್’ನಲ್ಲಿ ಮೀನು ಊಟದ ಹೊಟೇಲ್ ಇದ್ದು, ಕಡಿಮೆ ದರದಲ್ಲಿ ಮೀನು ಊಟ ನೀಡಲಾಗುತ್ತಿದೆ. ಇದರಿಂದ ಇಲ್ಲಿ ಪ್ರತಿದಿನ ನೂರಾರು ಜನರು ಆಗಮಿಸುತ್ತಿದ್ದು, ಅವರೆಲ್ಲರೂ ಇದೇ ರೀತಿ ರಸ್ತೆಯ ಮೇಲೆ ವಾಹನ ಪಾರ್ಕಿಂಗ್ ಮಾಡುತ್ತಿದ್ದಾರೆ. ಇದರಿಂದ ಹೊಟೇಲ್ ಮಾಲೀಕನ ನಿಷ್ಕಾಳಜಿಯಿಂದಲೂ ಜನರು ತೊಂದರೆಪಡುವಂತಾಗಿದೆ.
ಕುಳವೆ ಭಾಗದಲ್ಲಿ ಹತ್ತಾರು ಗ್ರಾಮಗಳಿದ್ದು, ಪ್ರತಿದಿನ ನೂರಾರು ಜನರು ಶಿರಸಿಗೆ ಬಂದು ಹೋಗುತ್ತಾರೆ. ಅಲ್ಲದೇ ಕಾಲೇಜು ವಿದ್ಯಾರ್ಥಿಗಳೂ ಇದೇ ರಸ್ತೆ ನೆಚ್ಚಿಕೊಂಡಿದ್ದಾರೆ. ಆದರೆ ರಿಕ್ಷಾ ಚಾಲಕರ, ಕೆಲ ಅನಾಗರಿಕರ ವರ್ತನೆಯಿಂದ ಕ್ರಾಸ್ ನಲ್ಲಿ ವಾಹನ ಬರುವುದು ತಿಳಿಯದ ಕಾರಣ ಅಪಘಾತಗಳು ಉಂಟಾಗುತ್ತಿದ್ದು, ಪೊಲೀಸರು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕಿದೆ.
ಈಗಾಗಲೆ ಸ್ಥಳೀಯರು ಅನೇಕ ಬಾರಿ ಎಚ್ಚರಿಕೆ ನೀಡಿದರೂ ಸಹ ಹೊಟೇಲ್ ಮಾಲೀಕನ ಅಧಿಕಪ್ರಸಂಗತನದಿಂದ ರಿಕ್ಷಾ ಚಾಲಕರು ರಸ್ತೆಯ ಮೇಲೆ ಗಾಡಿ ನಿಲ್ಲಿಸುವ ವರ್ತನೆ ಮುಂದುವರೆದಿದೆ. ಆದರೆ ಹೊಟೇಲ್ ಗೆ ಪರವಾನಿಗೆ ಇಲ್ಲ ಎನ್ನಲಾಗಿದ್ದು, ಈ ಬಗ್ಗೆ ನಗರಸಭೆ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಕೋಟ್ :
ಶಿರಸಿಯಿಂದ ಕುಳೆವೆಗೆ ಹೋಗುವ ಬನವಾಸಿ ರಸ್ತೆಯ ಕ್ರಾಸ್ ನಲ್ಲಿ ರಿಕ್ಷಾ ಚಾಲಕರು ಬೇಕಾಬಿಟ್ಟಿ ವಾಹನ ನಿಲ್ಲಿಸುತ್ತಾರೆ. ಇದರ ವಿರುದ್ಧ ಪೊಲೀಸರ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಇದಕ್ಕೆ ಸಹಕರಿಸುವ ಹೊಟೇಲ್ ಮಾಲೀಕರ ವಿರುದ್ಧವೂ ನಗರಸಭೆಯಿಂದ ಕ್ರಮ ಆಗಬೇಕು.
ಶ್ರೀನಾಥ ಶೆಟ್ಟಿ, ಕುಳವೆ ಗ್ರಾಪಂ ಸದಸ್ಯ.