Slide
Slide
Slide
previous arrow
next arrow

ಮಾಜಿ ಶಾಸಕರಿಂದ ಹೊಳೆ ಒತ್ತುವರಿ ಆರೋಪ; ಸ್ಥಳೀಯರಿಂದ ಧರಣಿ

300x250 AD

ಭಟ್ಕಳ: ತಾಲೂಕಿನ ಬೈಲೂರಿನ ದೊಡ್ಡ ಬಲಸೆಯ ಅನಾದಿ ಕಾಲದ ಹೊಳೆಗೆ ಮಾಜಿ ಶಾಸಕರು ಮಣ್ಣು ತುಂಬಿಸಿ, ಸ್ಥಳೀಯ ರೈತರಿಗೆ ಸಮಸ್ಯೆಯನ್ನುಂಟು ಮಾಡುತ್ತಿದ್ದಾರೆ ಎಂದು ಈ ಭಾಗದ ನಿವಾಸಿಗಳು ಹಾಗೂ ರೈತರು ಸ್ಥಳದಲ್ಲಿ ಧರಣಿ ನಡೆಸಿದ್ದಾರೆ.
ಬೈಲೂರು ಗ್ರಾಮದ ಕಡಲತೀರದ ಸರ್ವೇ ನಂಬರ್ 444 ಮತ್ತು 605ರ ಪಕ್ಕದಲ್ಲಿ ಸರಸ್ವತಿ ಹೊಳೆಯು ಹರಿಯುತ್ತಿದ್ದು, ಅನಾದಿ ಕಾಲದಿಂದಲೂ ಸಾರ್ವಜನಿಕರು ಹೊಳೆಗೆ ಬಾಂದಾರ್ ನಿರ್ಮಿಸಿ ಕೃಷಿ ಜಮೀನುಗಳಿಗೆ ಉಪ್ಪು ನೀರು ಹರಿಯದಂತೆ ಮಾಡಿಕೊಂಡಿದ್ದಾರೆ. ಹೊಳೆಯ ಮಧ್ಯಭಾಗದಲ್ಲಿ ಅತ್ಯಂತ ವಿರಳವಾದ ಕಾಂಡ್ಲಾ ಗಿಡಗಳಿವೆ. ಆದರೆ ಮಾಜಿ ಶಾಸಕರು ಮತ್ತು ಕುಟುಂಬದವರು ಹಾಗೂ ಅವರ ಹಿಂಬಾಲಕರು ಈ ಹೊಳೆಗೆ ಹೊನ್ನಾವರದ ಮಂಕಿ ಗ್ರಾಮದಿಂದ ಸುಮಾರು 10 ಟಿಪ್ಪರ್ ಲಾರಿಗಳಲ್ಲಿ ಪ್ರತಿದಿನ ನೂರಾರು ಲೋಡ್ ಮಣ್ಣುಗಳನ್ನು ತಂದು ಸುರಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಬೈಲೂರು ಗ್ರಾಮೀಣ ಪ್ರದೇಶವಾಗಿದ್ದು, ನಿರಂತರವಾಗಿ ಟಿಪ್ಪರ್ ಲಾರಿಗಳ ಓಡಾಟದಿಂದ ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಗೆ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಲಾರಿಗಳ ಓಡಾಟದಿಂದ ಉಂಟಾಗುವ ಧೂಳಿನಿಂದ ಅನೇಕ ಉಸಿರಾಟ ಸಂಬಂಧಿ ರೋಗಗಳಿಂದ ಬಳಲುತ್ತಿದ್ದಾರೆ. ಅಲ್ಲದೇ ಈ ಮಣ್ಣು ಸಾಗಾಟಕ್ಕೆ ಯಾವುದೇ ಇಲಾಖೆಯಿಂದ ಅನುಮತಿ ಪಡೆದಿಲ್ಲ ಎಂದೂ ದೂರಿದ್ದಾರೆ.
ಈ ರೀತಿ ಅಕ್ರಮವಾಗಿ ಹೊಳೆಗೆ ಮಣ್ಣು ತುಂಬಿ ಒತ್ತುವರಿ ಮಾಡಿಕೊಳ್ಳುವುದರಿಂದ ಹೊಳೆಯ ಸಹಜ ಹರಿವಿಗೆ ಅಡ್ಡಿಯಾಗಿದ್ದು, ಉಪ್ಪು ನೀರು ಕೃಷಿ ಭೂಮಿಗೆ ನುಗ್ಗುವ ಆತಂಕ ಎದುರಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಹ, ಕ್ಷಾಮದಂತಹ ಸಮಸ್ಯೆಗಳು ಈ ಭಾಗದಲ್ಲಿ ತಲೆದೋರಬಹುದು. ಕಾಂಡ್ಲಾ ಗಿಡಗಳು ನಾಶವಾಗಿ ಜೀವ ವೈವಿಧ್ಯತೆಗೆ ಧಕ್ಕೆಯಾಗಲಿದೆ ಎಂದು ತಿಳಿಸಿದ್ದಾರೆ.

ಅಧಿಕಾರಿಗಳ ಭೇಟಿ, ಪರಿಶೀಲನೆ
ಸ್ಥಳಕ್ಕೆ ಉಪವಿಭಾಗಾಧಿಕಾರಿ ಮಮತಾದೇವಿ ಹಾಗೂ ತಹಶೀಲ್ದಾರ ಸುಮಂತ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯಕ್ಕೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿರುವುದಾಗಿ ಸ್ಥಳೀಯರ ತಿಳಿಸಿದ್ದಾರೆ. ಆದರೆ ಇದರ ಹೊರತಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಜಮೀನು ಹೊಳೆಯ ಮಧ್ಯಭಾಗದವರೆಗೆ ಬರುತ್ತದೆ ಎಂದು ಮಣ್ಣನ್ನು ಹಾಕಿ ಹೊಳೆಯನ್ನು ಮುಚ್ಚಲು ಮುಂದಾಗಿದ್ದಾರೆ. ಆದರೆ ಅವರ ಜಮೀನಿನಂತೆ ಅನೇಕ ರೈತರ ಮಾಲ್ಕಿ ಜಮೀನು ಕೂಡ ಇಲ್ಲಿದೆ. ರಾಜಕೀಯ ಪ್ರಭಾವ ಬಳಸಿ ಹೊಳೆ ಮುಚ್ಚಿಸಲಾಗುತ್ತಿದೆ. ಇದರಿಂದಾಗಿ ಮಳೆಗಾಲದ ಸಂದರ್ಭದಲ್ಲಿ ಪ್ರವಾಹ ಬಂದು ಕೃಷಿ ಜಮೀನುಗಳು ಹಾಗೂ ಮನೆಗಳು ಮುಳುಗಡೆಯಾಗುವ ಸಂಭವ ಹೆಚ್ಚಿದೆ ಎಂದು ಈಶ್ವರ ನಾಯ್ಕ, ಹೇಳಿದರು .

300x250 AD

ಹೊಳೆಯ ಒತ್ತುವರಿಯಿಂದಾಗಿ ಜನರು ಮನೆ, ಜಮೀನು ಕಳೆದುಕೊಳ್ಳುವಂತೆ ಮಾಡಬಾರದು. ಉದ್ಯಮಕ್ಕಾಗಿ ಸಾವಿರಾರು ರೈತರ ಹಾಗೂ ನಿವಾಸಿಗರ ವಾಸಕ್ಕೆ ಸಮಸ್ಯೆಯನ್ನುಂಟು ಮಾಡುವುದು ಸರಿಯಲ್ಲ. ಈ ಮನವಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನದಲ್ಲಿ ದೊಡ್ಡ ಪ್ರಮಾಣದ ಹೋರಾಟ ಮಾಡಲಿದ್ದೇವೆ.ಎಂದು ಕುಮಾರ ನಾಯ್ಕ, ಹೇಳಿದರು.

Share This
300x250 AD
300x250 AD
300x250 AD
Back to top