• Slide
    Slide
    Slide
    previous arrow
    next arrow
  • ದಿ.ಪಿ.ಟಿ.ಗಜಾನನ ಹೆಗಡೆಗೆ ಸ್ವರ ನಮನ

    300x250 AD

    ಶಿರಸಿ: ನಾಡಿನ ಪ್ರಖ್ಯಾತ ತಬಲಾ ಕಲಾವಿದರು ಹಾಗೂ ಶ್ರೇಷ್ಠ ಗುರುಗಳಾದ ಗಿಳಿಗುಂಡಿಯ ದಿವಂಗತ ಪಂ.ಗಜಾನನ ಹೆಗಡೆಯವರ ಪುಣ್ಯತಿಥಿಯ ನಿಮಿತ್ತ ಸ್ವರ ಸಂವೇದನಾ ಪ್ರತಿಷ್ಠಾನ ಆಶ್ರಯದಲ್ಲಿ ಆಯೋಜಿಸಲ್ಪಟ್ಟ ಗಿಳಿಗುಂಡಿ ಗಜಾನನ ಹೆಗಡೆ ನೆನಪು ಸಂಗೀತ ಕಾರ್ಯಕ್ರಮ ಅವರ ಸ್ವಗೃಹದಲ್ಲಿ ಜರುಗಿತು.
    ಸಂಸ್ಥೆಯ ಗೌರವಾಧ್ಯಕ್ಷ ಎಮ್.ಕೆ.ಹೆಗಡೆ ಧಾರವಾಡ ಹಾಗೂ ಪದಾಧಿಕಾರಿಗಳಿಂದ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲ್ಪಟ್ಟ ನಂತರ ಮನೆಯ ಮಕ್ಕಳಾದ ತನ್ಮಯೀ ಹೆಗಡೆ ಹಾಗೂ ಅನುಶ್ರೀ ಹೆಗಡೆಯವರ ಗಾಯನ ಪ್ರಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಂತರದಲ್ಲಿ ಪ್ರತಿಭಾ ಹೆಗಡೆಯವರು ರಾಗ ಮಧುವಂತಿ ಹಾಗೂ ಸಂಗೀತಾ ಹೆಗಡೆಯವರು ‘ಶ್ರೀ’ ರಾಗವನ್ನು ಪ್ರಸ್ತುತಿಪಡಿಸಿದರು. ಅವರಿಗೆ ತಬಲಾದಲ್ಲಿ ನಿತಿನ್ ಹೆಗಡೆ, ವಿಘ್ನೇಶ್ ಕಾಮತ್ ಹಾಗೂ ಸಂವಾದಿನಿಯಲ್ಲಿ ಭರತ್ ಹೆಗಡೆ ಹೆಬ್ಬಲಸು, ರಿಷಬ್ ಹಾನಗಲ್ ಸಹಕರಿಸಿದರು. ಮುಂದುವರೆದು ಜನಪ್ರಿಯ ಕಲಾವಿದೆ ಬಕುಲಾ ಹೆಗಡೆಯವರಿಂದ ಮುಸ್ಸಂಜೆಗೆ ಸರಿಯಾಗಿ ಭರತ ಹೆಗಡೆ, ಹೆಬ್ಬಲಸು ಹಾಗೂ ಪಂಚಮ ಉಪಾಧ್ಯಾಯ್‌ರವರ ಸಹಕಾರದೊಂದಿಗೆ ನಡೆದ ರಾಗ ‘ಶ್ಯಾಮ್ ಕಲ್ಯಾಣ್’ ಗಾಯನ, ಕಾರ್ಯಕ್ರಮಕ್ಕೆ ಕಳೆಗಟ್ಟಿತು.
    ನಂತರ ನಡೆದ ಅಂತಾರಾಷ್ಟ್ರೀಯ ತಬಲಾ ಮೇರು ಕಲಾವಿದರಾದ ಪಂ.ರಾಮದಾಸ್ ಪಲ್ಸುಲೆ ಅವರ ತಬಲಾ ಸೋಲೊ, ವಿಶಿಷ್ಟ ಪೇಶಕಾರ್ ಹಾಗೂ ಚಕ್ರಧಾರಗಳ ಪ್ರಸ್ತುತಿಗಳೊಂದಿಗೆ, ಝಪ್ ತಾಳದ ವಿಸ್ತಾರ ತಬಲಾ ವಾದನ ವಿಶೇಷ ರಚನೆಗಳೊಂದಿಗೆ, ಪುಣೆಯ ಅಮೇಯ ಬಿಚುರವರ ಸಂವಾದಿನಿಯ ಲೆಹರಾದೊಂದಿಗೆ ಮೇಳೈಸಿ ಶ್ರೋತೃಗಳನ್ನು ಮಂತ್ರಮುಗ್ಧಗೊಳಿಸಿತು. ತಬಲಾ ಸ್ವತಂತ್ರ ವಾದನದ ಯಶಸ್ಸಿಗೆ ಕೇಳುಗರ ಕರಡಾತನ ಮತ್ತು ಮೂಕವಿಸ್ಮಿತ ಮುಖಗಳೇ ಸಾಕ್ಷಿ. ಸಹವಾದನದಲ್ಲಿ ಶಿಷ್ಯರಾದ ಹೇಮಂತ ಜೋಶಿ ಹಾಗೂ ಶಮಂತ ದೇಸಾಯಿ ಸಹಕರಿಸಿದರು.
    ನಂತರ ಗಾಯಕ ಶ್ರೀಪಾದ ಹೆಗಡೆ ಸೋಮನಮನೆಯವರ ರಾಗ ‘ನಂದ್’ ಪ್ರಬುಧ್ಧ ಗಾಯನ, ಭಾರವಿ ದೇರಾಜೆಯವರ ತಬಲಾ ಹಾಗೂ ಸಂವಾದಿನಿಯಲ್ಲಿ ಭರತ್ ಹೆಗಡೆ ಹೆಬ್ಬಲಸುರವರ ಸಹಕಾರದೊಂದಿಗೆ ಎಲ್ಲರ ಮನಗೆದ್ದಿತು. ಗಿಳಿಗುಂಡಿಯ ಮತ್ತೋರ್ವ ಕಲಾವಿದ ಗುರುಪ್ರಸಾದ ಹೆಗಡೆಯವರಿಂದ ನಡೆದ ಬಹಳ ಅಪರೂಪದ ವಾದ್ಯವಾದ ‘ಸಾರಂಗೀ’ಯ ಪ್ರಸ್ತುತಿ, ತಬಲಾದಲ್ಲಿ ಪಂ.ರಾಮದಾಸ್ ಪಲ್ಸುಲೆರವರ ಅದ್ಭುತ ಸಹಕಾರದೊಂದಿಗೆ, ರಾಗ ‘ದರ್ಬಾರಿ ಕಾನ್ಹಡಾ’ದ ವಿಶೇಷ ಅನುಭವವನ್ನು ನೀಡಿತು.
    ಕಾರ್ಯಕ್ರಮದ ಕೊನೆಯಲ್ಲಿ ನಡೆದ ಹಿರಿಯ ಸಂಗೀತ ವಿದ್ವಾಂಸರಾದ ಹಾಗೂ ಚಿರಪರಿಚಿತ ಸಂಗೀತ ಗುರುಗಳಾದ ಪಂ.ಎಮ್.ಪಿ.ಹೆಗಡೆ ಪಡಿಗೆರೆರವರ ಅಪ್ರಚಲಿತ, ಅಪರೂಪದ ರಾಗಗಳಾದ ಆರಭಿ, ಭೈರವ ಬಾಹರ್‌ಗಳ ಪಾಂಡಿತ್ಯಪೂರ್ಣ ಪ್ರಸ್ತುತಿ ಕಾರ್ಯಕ್ರಮಕ್ಕೆ ಮೆರುಗು ನೀಡಿತು. ತಬಲಾದಲ್ಲಿ ಪಂ.ರಾಮದಾಸ್ ಪಲ್ಸುಲೆ ಹಾಗೂ ಸಂವಾದಿನಿಯಲ್ಲಿ ಗುರುಪ್ರಸಾದ ಹೆಗಡೆಯವರು ಸಹಕರಿಸಿದರು. ಕೊನೆಯಲ್ಲಿ ಕಾರ್ಯದರ್ಶಿಗಳಾದ ಮಂಜುನಾಥ ಹೆಗಡೆಯವರು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ವಂದನಾರ್ಪಣೆಯನ್ನು ಸಲ್ಲಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top