• Slide
  Slide
  Slide
  previous arrow
  next arrow
 • ಸೈಲ್ ಅವಧಿಯಲ್ಲಿ ಮುಡಗೇರಿ ಅಭಿವೃದ್ಧಿಯ ಪರ್ವ ಕಾಲದಲ್ಲಿತ್ತು: ಶಂಭು ಶೆಟ್ಟಿ

  300x250 AD

  ಕಾರವಾರ: ತಾಲೂಕಿನ ಮುಡಗೇರಿ ಪಂಚಾಯತ್ ಮೂಲಭೂತ ಅಭಿವೃದ್ಧಿಯ ಹಿನ್ನಲೆಯಲ್ಲಿ ಮಾಜಿ ಶಾಸಕ ಸತೀಶ ಸೈಲ್ ಅವಧಿಯಲ್ಲಿ ಪರ್ವಕಾಲದಲ್ಲಿ ಮೆರೆಯುತಿತ್ತು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಶಂಭು ಶೆಟ್ಟಿ ತಿಳಿಸಿದ್ದಾರೆ.
  ಮುಡಗೇರಿ ಪಂಚಾಯತ್ ಜನಪ್ರತಿನಿಧಿಗಳು, ಮಾಜಿ ಶಾಸಕ ಸತೀಶ ಸೈಲ್ ಅವಧಿಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯ ಎಂಬರ್ಥದಲ್ಲಿ ನೀಡಿದ್ದ ಪ್ರಕಟಣೆಗೆ ಪ್ರತಿಕ್ರಿಯಿಸಿರುವ ಅವರು, ಸತೀಶ ಸೈಲ್ ಅವಧಿಯಲ್ಲಿ ಮಾಜಾಳಿ ಅಂಗಡಿ ಕ್ರಾಸ್‌ನಿಂದ ಮೊದಲ್ಗೊಂಡು, ಅಂಗಡಿ, ಮುಡಗೇರಿ, ಅಸ್ನೋಟಿ ಗಣಪತಿ ದೇವಾಲಯ ತನಕ ಕಾಂಕ್ರೀಟ್ ರಸ್ತೆ ಮತ್ತು ಸೇತುವೆ, ಡುಮನ್ ಸಿಟ್ಟಾ ರಸ್ತೆ, ಮುಡಗೇರಿ ಮಠವಾಡ ರಸ್ತೆ, ಅರಾವ್ ರಸ್ತೆ, ಹೊಸ ಪಟ್ಟಣ ರಸ್ತೆ, ಅಗರ್ಪಾಂಡ್ ರಸ್ತೆ, ಪಂಟಲ್ ಬಾಗ್ ರಸ್ತೆ, ಹೊಸಳ್ಳಿ ಮಾರಂಗಣಿ ರಸ್ತೆ ಅರ್ಧ, ಮವಿನಹೊಳೆ ಹಳ್ಳದಿಂದ ಹಳೇಬಾಗ್ ಸಂಪೂರ್ಣ ರಸ್ತೆ, ಡ್ಯಾಂ ರಸ್ತೆ, ಡ್ಯಾಂ ಕೆಲಸ, ಬಡವರಿಗೆ ಹಲವಾರು ಮನೆ ಇತ್ಯಾದಿ. ಇವೆಲ್ಲಾ ಮುಡಗೇರಿ ಪಂಚಾಯತ್‌ನಲ್ಲಿ ಪಂಚಾಯತ್ ಅನುದಾನದ ಹೊರತಾಗಿ ನಡೆದ ಕಾಮಗಾರಿಗಳು. ಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ಸತೀಶ್ ಸೈಲ್ ಅವಧಿಯಲ್ಲಿ ಅಭಿವೃದ್ಧಿಯೇ ನಡೆದಿಲ್ಲ ಎನ್ನುವ ಮುಡಗೇರಿ ಜನಪ್ರತಿನಿಧಿಗಳೇ, ಪ್ರಸ್ತುತ ಶಾಸಕಿಯವರ ಅವಧಿಯಲ್ಲಿ ಇಡೀ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಏನೆಂದು ನಿಮ್ಮಲ್ಲಿ ಕೇಳುತ್ತಿಲ್ಲ, ಬದಲಾಗಿ ನಿಮ್ಮ ಪಂಚಾಯತ್ ಪ್ರದೇಶದಲ್ಲಿ, ಪಂಚಾಯತ್ ನಿಧಿಯಿಂದ ಹೊರತಾಗಿ ಏನೇನು ಮೂಲಭೂತ ಸೌಕರ್ಯ ಒದಗಿಸಲಾಗಿದೆ ಎಂದು ಸಾರ್ವಜನಿಕಕರ ಗಮನಕ್ಕೆ ತನ್ನಿ ಎಂದಿದ್ದಾರೆ.
  ಮುಖ್ಯವಾಗಿ ನೌಕಾನೆಲೆ ನಿರಾಶ್ರಿತರ ಪರಿಹಾರವನ್ನು ಸತೀಶ ಸೈಲ್ ವಿತರಿಸಿಲ್ಲ ಎಂಬ ನಿಮ್ಮ ಆಪಾದನೆ ನಮಗೆ ವರದಾನವಾಗಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಮಾಜಿ ಶಾಸಕ ಸತೀಶ್ ಸೈಲ್ ತಂಡ ಸೀಬರ್ಡ್ ನಿರಾಶ್ರಿತರ ಹೆಚ್ಚುವರಿ ಪರಿಹಾರಕ್ಕಾಗಿ ರಾಜಕೀಯ, ಕಾನೂನಾತ್ಮಕವಾಗಿ ಹೋರಾಟ ಮಾಡಿ ಕಟ್ಟ ಕಡೆಗೆ ಸುಪ್ರೀಂ ಕೋರ್ಟ್ನಲ್ಲಿ ಹಿರಿಯ ವಕೀಲ ದೇವದತ್ತ ಕಾಮತ್ ಜೊತೆಗೂಡಿ ನಡೆಸಿದ ಕಾನೂನು ಹೋರಾಟದಲ್ಲಿ ಜಯಶೀಲರಾಗಿ ನಿರಾಶ್ರಿತರಿಗೆ ಪ್ರತಿ ಗುಂಟೆ ಜಮೀನಿಗೆ ಈ ಹಿಂದೆ ಕೊಟ್ಟಿರುವ ರೂಪಾಯಿ 450 ರೂಪಾಯಿ ಬದಲಾಗಿ 11 ಸಾವಿರ ಪರಿಹಾರ ನೀಡತಕ್ಕದ್ದು ಎಂದು ತೀರ್ಪು ತರಿಸುವಲ್ಲಿ ವಕೀಲರ ತಂಡದೊಂದಿಗೆ ಮಾಜಿ ಶಾಸಕ ಸತೀಶ ಸೈಲ್ ಯಶಸ್ವಿ ಆಗಿರುವುದು ಈಗ ಬಿಜೆಪಿ ಪಕ್ಷದಲ್ಲಿರುವ ಸೀಬರ್ಡ್ ನಿರಾಶ್ರಿತರೂ ನಿರಾಕರಿಸುವುದಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ನಂತರ ಅದಕ್ಕೆ ನಡೆಯಬೇಕಾಗಿದ್ದ ಇತರ ಎಲ್ಲಾ ಪ್ರಕ್ರಿಯೆ ಮುಗಿದು ಹಣ ಬಿಡುಗಡೆ ಸಮಯ ಬಂದಾಗ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಬದಲಾಗಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತು. ಇಂತಿಷ್ಟೇ ಸಮಯದ ಒಳಗೆ ಪರಿಹಾರ ನೀಡತಕ್ಕದ್ದು ಎಂದು ಸುಪ್ರೀಂ ಕೋರ್ಟ್ ತೀರ್ಪು ಇದ್ದಿದ್ದ ಪ್ರಯುಕ್ತ ಬಿಜೆಪಿ ಕೇಂದ್ರ ಸರಕಾರದ ವಿತ್ತ ಸಚಿವರು ಹಣ ಬಿಡುಗಡೆ ಮಾಡಿ ಕಾರವಾರ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಪರಿಹಾರ ವಿತರಣಾ ಸಮಾರಂಭ ನಡೆಸಿದರು. ಒಂದುವೇಳೆ ಪರಿಹಾರ ವಿತರಿಸಲು ಬಿಜೆಪಿ ಕೇಂದ್ರ ಸರಕಾರ ಹಿಂದೆ ಮುಂದೆ ನೋಡಿದ್ದರೆ ಅದು ನ್ಯಾಯಾಲಯ ನಿಂದನೆ ಆಗುತ್ತಿತ್ತು. ಆಗ ಕೇಂದ್ರ ದಲ್ಲಿ ಬಿಜೆಪಿ ಬದಲು ಕಾಂಗ್ರೆಸ್ಸ್ ಸರಕಾರ ಇರುತಿದ್ದರೆ ಕಾಂಗ್ರೆಸ್ಸ್ ಸರಕಾರ ಕೂಡಾ ಪರಿಹಾರ ವಿತರಿಸುತಿತ್ತು. ಇದನ್ನು ಈ ಚುನಾವಣಾ ಸಮಯದಲ್ಲಿ ಸಾರ್ವಜನಿಕರಿಗೆ ಮತ್ತೊಮ್ಮೆ ನೆನಪಿಸಲು ನಮಗೆ ಸಹಾಯ ಮಾಡಿದ ಮುಡಗೆರಿ ಪಂಚಾಯತ್ ಜನಪ್ರತಿನಿಧಿಗಳನ್ನು ನಾವು ಸ್ಮರಿಸಲೇಬೇಕಾಗಿದೆ ಎಂದಿದ್ದಾರೆ.
  ಇನ್ನು ಮುಡಗೇರಿ ಭೂಸ್ವಾಧೀನ ಕುರಿತು ಸತೀಶ ಸೈಲ್ ಮಾಡಿದ ಪರಿಶ್ರಮ ಅಂದು ಅವರ ಬೆನ್ನಹಿಂದೆಯೇ ಹಿಂದು ಮುಂದು ತಿರುಗುತ್ತಿದ್ದ ಈಗಿನ ಮುಡಗೇರಿ ಪಂಚಾಯತ್ ಕೆಲವು ಪ್ರತಿನಿಧಿಗಳಿಗೆ ಗೊತ್ತಿಲ್ಲವೆಂದರೆ ಆಶ್ಚರ್ಯ ಆಗುತ್ತದೆ. ರಾಜಕೀಯ ಎಂಬುದು ನಿಂತ ನೀರಲ್ಲ, ಹರಿಯುವ ನೀರು. ಇದರಲ್ಲಿ ಯಾವುದೇ ರಾಜಕೀಯ ಜನಪ್ರತಿನಿಧಿಗಳ ಮೂಲ ಹುಡುಕುತ್ತಾ ಹೋದರೆ ಅಮೃತಕ್ಕಿಂತ ವಿಷವೇ ಹೆಚ್ಚಾಗಿ ಸಿಗುತ್ತದೆ. ಇತ್ತೀಚೆಗೆ ಅಪ್ಪರ್ ಕೃಷ್ಣಾ ಪ್ರೊಜೆಕ್ಟ್ ಪ್ರದೇಶದಲ್ಲಿ ಎಕರೆಗೆ ಐವತ್ತು ಲಕ್ಷ ಪರಿಹಾರ ನೀಡುವ ಕುರಿತು ಅಲ್ಲಿನ ಜನಪ್ರತಿನಿಧಿಗಳು ಮತ್ತು ಸರಕಾರದ ಮಧ್ಯೆ ಮಾತುಕತೆ ನಡೆಯುತ್ತಿದ್ದು ಅದೇ ರೀತಿಯ ಪರಿಹಾರ ಮುಡಗೇರಿ ಭೂಸ್ವಾಧೀನನಕ್ಕೂ ನೀಡುವಂತೆ ಹಾಲಿ ಶಾಸಕರು ಪ್ರಯತ್ನ ಮಾಡಿ ಸಫಲ ರಾಗಲಿ. ಮುಂದೆ ಈ ಪರಿಹಾರ ವಿತರಿಸುವಾಗ ಸರಕಾರ ಮತ್ತು ಕಾರವಾರ ಶಾಸಕರು ಬದಲಾದರೂ ನಾವು ಈಗಿರುವ ಶಾಸಕರೇ ಹೆಚ್ಚು ಪರಿಹಾರ ತಂದದ್ದೆಬಂತಂತೆ ಆಗಲೂ ಅಭಿನಂದಿಸುತ್ತೇವೆ ಎಂದು ಸೈಲ್ ಅವರನ್ನು ಟೀಕಿಸಿದವರಿಗೆ ಪ್ರತ್ಯುತ್ತರ ನೀಡಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top