Slide
Slide
Slide
previous arrow
next arrow

ಹಿರೇಗುತ್ತಿ ಹೆದ್ದಾರಿ ಕಾಮಗಾರಿಯಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷ

300x250 AD

ಗೋಕರ್ಣ: ಹಿರೇಗುತ್ತಿಯಲ್ಲಿ ನಡೆಯುತ್ತಿರುವ ಚತುಷ್ಪಥ ಹೆದ್ದಾರಿ ನಿರ್ಮಾಣದಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದ್ದು, ಅಧಿಕಾರಿಗಳು ಈ ಬಗ್ಗೆ ದಿವ್ಯ ನಿರ್ಲಕ್ಷ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಮೊದಲು ಬ್ರಹ್ಮಜಟಕ ದೇವಾಲಯದ ಕಟ್ಟಡದ ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ರಾಷ್ಟೀಯ ಹೆದ್ದಾರಿ 66ರಲ್ಲಿ ನುಶಿಕೋಟೆ ಕ್ರಾಸ್‌ನವರೆಗೆ ಎರಡೂ ಬದಿಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ವಿಸ್ ರಸ್ತೆ ನಿರ್ಮಿಸುವ ಜೊತೆಗೆ ಬ್ರಹ್ಮಜಟಗ ದೇವಸ್ಥಾನದ ಹತ್ತಿರದಿಂದ ಹರಿಜನ ಕೇರಿಗೆ ಹೋಗುವ ರಸ್ತೆಗೆ ಸಂಪರ್ಕ ಕಲ್ಪಿಸುವ ವಿಚಾರವಾಗಿ ಹಲವು ಬಾರಿ ಹಿರೇಗುತ್ತಿಯಲ್ಲಿ ಸಭೆ ನಡೆದಿತ್ತು. ಅಲ್ಲದೇ 2018ರಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ಹಿರೇಗುತ್ತಿ ಗ್ರಾಮ ಪಂಚಾಯತ್‌ದಲ್ಲಿ ಸಾರ್ವಜನಿಕರೊಂದಿಗೆ ಚರ್ಚಿಸಿ ಯಾವ ರೀತಿ ರಸ್ತೆ ನಿರ್ಮಾಣವಾಗಬೇಕು ಎಂಬುದರ ಕುರಿತು ಈ ಮೊದಲು ಮಾಡಿದ ನೀಲನಕ್ಷೆಯಂತೆ ರಸ್ತೆ ನಿರ್ಮಿಸಬೇಕು ಎಂಬ ಬಗ್ಗೆ ನಿಯಮಾವಳಿ ಮಾಡಲಾಗಿತ್ತು. ಆದರೆ ಈಗ ನಿಯಮಾವಳಿಯನ್ನು ಗಾಳಿಗೆ ತೂರಿ ಐಆರ್‌ಬಿ ಅಧಿಕಾರಿಗಳು ತಮಗೆ ತೋಚಿದಂತೆ ರಸ್ತೆ ಕಾಮಗಾರಿ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಐಆರ್‌ಬಿ ಅಧಿಕಾರಿಗಳನ್ನು ಊರಿನವರು ಸಂಪರ್ಕಿಸಿದರೆ ಸೂಕ್ತ ವಿವರಣೆ ನೀಡದೇ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಈ ಹಿಂದೆ ಜಿಲ್ಲಾಧಿಕಾರಿಗಳ, ಸಾರ್ವಜನಿಕ ಸಭೆಯಲ್ಲಿ ನಡೆದ ನಿಯಮಾವಳಿಯಂತೆ ರಸ್ತೆ ಕಾಮಗಾರಿ ನಡೆಯಬೇಕೆಂದು ಹಿರೇಗುತ್ತಿ ಗ್ರ‍್ರಾಮ ಪಂಚಾಯತ, ಶ್ರೀ ಬ್ರಹ್ಮಜಟಕ ಯುವಕ ಸಂಘ ಹಾಗೂ ಹೈಸ್ಕೂಲ್ ಹಾಗೂ ಕಾಲೇಜು ಆಡಳಿತ ಮಂಡಳಿ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಊರ ನಾಗರಿಕರು ಆಗ್ರಹಿಸಿ, ತಪ್ಪಿದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರ ಒತ್ತಾಯವೇನು.?

300x250 AD

• ಹಿರೇಗುತ್ತಿ ರಾಷ್ಟೀಯ ಹೆದ್ದಾರಿ 66ರಲ್ಲಿ ನುಶಿಕೋಟೆ ಕ್ರಾಸ್‌ನಿಂದ ಬಳಲೆ ಕ್ರಾಸ್‌ನವರೆಗೆ ಎರಡೂ ಬದಿಯಲ್ಲಿ ಸರ್ವಿಸ್ ರಸ್ತೆ ಮಾಡಬೇಕು. ಬ್ರಹ್ಮಜಟಗ ದೇವಸ್ಥಾನದ ಸಮೀಪದಿಂದ ಶಾಲಾ, ಕಾಲೇಜಿನವರೆಗೂ ಮಳೆಗಾಲದಲ್ಲಿ ಮಳೆಯ ನೀರು ಹರಿದು ಹೋಗುವಂತೆ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಮಾಡಿ ನೀರು ಹಳ್ಳಕ್ಕೆ ಸೇರುವ ವ್ಯವಸ್ಥೆ ಮಾಡಬೇಕು.
• ಸರ್ವೀಸ್ ರಸ್ತೆ ಇಲ್ಲದೇ ಇರುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಗುತ್ತಿ, ಅಂಚೆಕಛೇರಿ, ಅರಣ್ಯ ಇಲಾಖೆ ಆಫೀಸ್, ಕತ್ತದ ಫ್ಯಾಕ್ಟರಿ, ಪಶು ಚಿಕಿತ್ಸಾಲಯ, ಹರಿಜನ ಕೇರಿಗೆ ಹೋಗಲು ಸೂಕ್ತ ಸಂಪರ್ಕ ರಸ್ತೆ ನಿರ್ಮಿಸಬೇಕು.
• ಹಿರೇಗುತ್ತಿ ಶಾಲಾ-ಹೈಸ್ಕೂಲ್ ಹಾಗೂ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ದಿನಂಪ್ರತಿ ವಿದ್ಯಾಭ್ಯಾಸಕ್ಕೆ ಬರುತ್ತಿದ್ದು, ವಿದ್ಯಾರ್ಥಿಗಳಿಗೆ ಸರ್ವೀಸ್ ರಸ್ತೆ ಅನುವು ಮಾಡಿ ಕೊಡಬೇಕು. ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಎರಡೂ ಬದಿಯಲ್ಲಿ ಬಸ್ ತಂಗುದಾಣ ನಿರ್ಮಿಸಿ ಗ್ರಾಮೀಣಭಾಗದ ಮಕ್ಕಳಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡಿ ರಸ್ತೆ ಯುದ್ದಕ್ಕೂ ದೀಪದ ವ್ಯವಸ್ಥೆ ಮಾಡಬೇಕು.
• ಹಿರೇಗುತ್ತಿಯಿಂದ ಸರ್ವಿಸ್ ರೋಡ್ ಗೋಕರ್ಣ ರೋಡ್ ಬಳಲೆಯವರೆಗೂ ಸಂಪರ್ಕ ಕಲ್ಲಿಸಬೇಕು. ಯಾಕೆಂದರೆ ಗೋಕರ್ಣ ರಸ್ತೆಗೆ ಸರಿಯಾದ ರಸ್ತೆ ಇಲ್ಲದೇ ಇರುವುದರಿಂದ ವಾಹನ ಸವಾರರು ವಿರುದ್ದ ದಿಕ್ಕಿನಲ್ಲಿ ವಾಹನ ಚಲಾಯಿಸಿ ಈಗಾಗಲೇ ಅನೇಕ ಅಪಘಾತಗಳಿಂದ ಜೀವಹಾನಿಯಾಗಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಗಮನಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಲಿಸಬೇಕು.
• ಹಿರೇಗುತ್ತಿ ರಾಷ್ಟೀಯ ಹೆದ್ದಾರಿ ನಿರ್ಮಾಣದಲ್ಲಿರುವ ಈ ಎಲ್ಲಾ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಊರಿನ ಎಲ್ಲಾ ಸಂಘಟನೆಗಳು ಆಗ್ರಹಿಸಿವೆ.

Share This
300x250 AD
300x250 AD
300x250 AD
Back to top