• Slide
    Slide
    Slide
    previous arrow
    next arrow
  • ಡಿ.16,17,18ಕ್ಕೆ ಕರಾವಳಿ‌ ಉತ್ಸವ: ಅದ್ದೂರಿಯಾಗಿ ಆಚರಿಸಲು ಶಾಸಕಿ‌ ರೂಪಾಲಿ ಭರವಸೆ

    300x250 AD

    ಕಾರವಾರ: ಕಳೆದ ಮೂರು ವರ್ಷಗಳಿಂದ ಸ್ಥಗಿತವಾಗಿದ್ದ  ಕರಾವಳಿ ಉತ್ಸವವನ್ನ ಆಚರಿಸಲು ಮತ್ತೆ ಸಿದ್ದತೆ ಪ್ರಾರಂಭಿಸಲಾಗಿದೆ. ಡಿಸೆಂಬರ್ 16, 17 ಹಾಗೂ 18ರಂದು ಮೂರು ದಿನಗಳ ಕಾಲ ಕರಾವಳಿ ಉತ್ಸವ ಆಚರಿಸಲು ನಿರ್ಣಯಿಸಲಾಗಿದೆ.

    ಕಾರವಾರದ ರವೀಂದ್ರ ನಾಥ್ ಠಾಗೋರ್ ಕಡಲ ತೀರದಲ್ಲಿ ಪ್ರತಿ ವರ್ಷ ಜಿಲ್ಲಾಡಳಿತದಿಂದ ಕರಾವಳಿ ಉತ್ಸವ ಕಾರ್ಯಕ್ರಮವನ್ನ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿತ್ತು. ರಾಜ್ಯ ಹಾಗೂ ದೇಶದ ಖ್ಯಾತ ಗಾಯಕ, ನಟರನ್ನ ಕರೆಸಿ ಜೊತೆಗೆ ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡಿ ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಡಲ ತೀರದಲ್ಲಿ ಆಯೋಜನೆ ಮಾಡಲಾಗುತ್ತಿತ್ತು. ನಗರದಲ್ಲಿ ನಡೆಯುವ ಉತ್ಸವಕ್ಕೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಜನರು ನೋಡಲು ಆಗಮಿಸುತ್ತಿದ್ದರು. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿ ಇದ್ದ ವೇಳೆ ಕೊನೆಯಾಗಿ ಉತ್ಸವ ಆಯೋಜನೆ ಮಾಡಲಾಗಿತ್ತು.

    ಅದಾದ ನಂತರ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಕೊರೋನಾ ಇನ್ನಿತರ ಕಾರಣದಿಂದ ಉತ್ಸವವನ್ನ ಆಯೋಜನೆ ಮಾಡಲು ಆಗಿರಲಿಲ್ಲ. ಈ ಬಾರಿ ಉತ್ಸವವನ್ನ ಮಾಡುವಂತೆ ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿ ಬಂದಿದ್ದು ಮೊದ ಮೊದಲು ಸರ್ಕಾರದ ಬಳಿ ಉತ್ಸವ ಮಾಡಲು ಹಣ ಬಿಡುಗಡೆ ಮಾಡುವುದು ಕಷ್ಟ ಈ ನಿಟ್ಟಿನಲ್ಲಿ ಉತ್ಸವ ಮಾಡುವುದು ಅನುಮಾನ ಎನ್ನಲಾಗಿತ್ತು. ಆದರೆ ಚುನಾವಣೆ ವರ್ಷವಾಗಿರುವ ಹಿನ್ನಲೆಯಲ್ಲಿ ಈ ವರ್ಷ ಕರಾವಳಿ ಉತ್ಸವವನ್ನ ಆಯೋಜನೆ ಮಾಡಲೇ ಬೇಕು ಎಂದು ಕಾರವಾರ ಶಾಸಕಿ ರೂಪಾಲಿ ನಾಯ್ಕ ಪಟ್ಟು ಹಿಡಿದಿದ್ದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ,  ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅವರ ಸಮ್ಮುಖದಲ್ಲಿ ಸಭೆ ನಡೆಸಿ ಉತ್ಸವಕ್ಕೆ ದಿನಾಂಕವನ್ನ ನಿಗದಿ ಮಾಡಲಾಗಿದೆ.

    ಡಿಸೆಂಬರ್ ಕೊನೆಯ ವಾರದಲ್ಲಿ ಉತ್ಸವ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕ್ರಿಸ್ ಮಸ್ ಇರುವ ಹಿನ್ನಲೆಯಲ್ಲಿ ಆ ದಿನಾಂಕ ಬೇಡ ಎಂದು ಹಲವರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇನ್ನು ಜನವರಿ ಮೊದಲ ವಾರದಲ್ಲೂ ಹೊಸ ವರ್ಷ ಸಂಭ್ರಮಾಚರಣೆ ಇರುವ ಹಿನ್ನಲೆಯಲ್ಲಿ ಡಿಸೆಂಬರ್ 16, 17 ಹಾಗೂ 18 ಸೂಕ್ತ ಎಂದು ದಿನಾಂಕವನ್ನ ನಿರ್ಧರಿಸಲಾಗಿದೆ. ಇನ್ನು ಉತ್ಸವಕ್ಕೆ ಇನ್ನು ಒಂದೇ ತಿಂಗಳು ಇರುವ ಹಿನ್ನಲೆಯಲ್ಲಿ ಕಲಾವಿದರನ್ನ ಕರೆಸುವ, ಆರ್ಥಿಕ ಕ್ರೋಡಿಕರಣ ಸೇರಿದಂತೆ ಕೆಲಸಗಳನ್ನ ತುರ್ತಾಗಿ ಮಾಡುವಂತೆ ಸಭೆಯಲ್ಲಿ ಚರ್ಚಿಸಲಾಗಿದೆ.

    ಅದ್ಧೂರಿಯಾಗಿ ಆಚರಿಸುತ್ತೇವೆ: ರೂಪಾಲಿ ನಾಯ್ಕ

    ಈ ಬಾರಿಯ ಕರಾವಳಿ ಉತ್ಸವವನ್ನಅದ್ದೂರಿಯಾಗಿ ಆಚರಿಸಲಾಗುವುದು ಎಂದು ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಹೇಳಿದ್ದಾರೆ.

    ನಾನು ಶಾಸಕರಾದ ಮೊದಲ ವರ್ಷ ಕರಾವಳಿ ಉತ್ಸವ ಮಾಡಲಾಗಿತ್ತು. ನಂತರ ಕೊರೋನಾ ಇನ್ನಿತರ ಕಾರಣದಿಂದ ಮಾಡಲು ಆಗಿರಲಿಲ್ಲ. ಆದರೆ ಈ ವರ್ಷ ಎಲ್ಲಾ ವರ್ಷಕ್ಕಿಂತಲೂ ಅದ್ದೂರಿಯಾಗಿ ಆಚರಿಸಿ ಜನರಿಗೆ ಮನರಂಜಿಸಲು ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದರು.

    300x250 AD

    ಉತ್ಸವದಲ್ಲಿ ರಾಜ್ಯ ರಾಷ್ಟ್ರ ಮಟ್ಟದ ಕಲಾವಿದರ ಜೊತೆ ಸ್ಥಳೀಯ ಕಲಾವಿದರಿಗೂ ಹೆಚ್ಚಿನ ಆದ್ಯತೆ ನೀಡಲಾಗುವುದು. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ದಿನಾಂಕ ನಿಗದಿ ಮಾಡಿಕೊಂಡ ಬಗ್ಗೆ ತಿಳಿಸಿದ್ದು ಸರ್ಕಾರದ ಅನುದಾನಕ್ಕೆ ಉಸ್ತುವಾರಿ ಸಚಿವರಿಂದ ಪ್ರಯತ್ನ ಮಾಡಿಸಲಾಗುವುದು.

    ಉತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿಗಳನ್ನು ಕರೆಸುವ ಪ್ರಯತ್ನ ಮಾಡಲಾಗುವುದು. ಸಾರ್ವಜನಿಕರ ಸಹಕಾರದಿಂದ ಯಶಸ್ವಿಯಾಗಿ ಕರಾವಳಿ ಉತ್ಸವ ಆಚರಿಸುತ್ತೇವೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದ್ದಾರೆ.

    ಎರಡು ಕೋಟಿ ದಾಟಿದ್ದ ಉತ್ಸವದ ಖರ್ಚು!

    ಕಳೆದ ಮೂರು ವರ್ಷಗಳ ಹಿಂದೆ ಕಾರವಾರದಲ್ಲಿ ನಡೆದಿದ್ದ ಕರಾವಳಿ ಉತ್ಸವದ ಖರ್ಚು ಎರಡು ಕೋಟಿಗೂ ಅಧಿಕ ಹಣ ಆಗಿತ್ತು ಎನ್ನಲಾಗಿದೆ. ಉತ್ಸವಕ್ಕೆ ಕರೆಸಿದ್ದ ಕಲಾವಿದರ ಖರ್ಚೇ 80 ಲಕ್ಷ ದಾಟಿದ್ದು ಇನ್ನುಳಿದಂತೆ ಪೆಂಡಲ್, ಲೈಟಿಂಗ್ ಸೇರಿದಂತೆ ದುಬಾರಿ ಖರ್ಚಾಗಿತ್ತು. ಈ ಬಾರಿಯೂ ದೊಡ್ಡ ಮಟ್ಟದಲ್ಲಿಯೇ ಉತ್ಸವ ಆಚರಿಸಬೇಕಾಗಿರುವುದರಿಂದ ಅಷ್ಟೇ ಹಣವನ್ನ ಕ್ರೋಢೀಕರಣ ಮಾಡುವ ಚರ್ಚೆ ಒಂದೆಡೆ ನಡೆದರೆ, ಇನ್ನೊಂದೆಡೆ ಅನಗತ್ಯ ದುಂದು ವೆಚ್ಚಕ್ಕೂ ಕಡಿವಾಣ ಹಾಕಿ ಕಡಿಮೆ ಮೊತ್ತದಲ್ಲಿ ಅದ್ದೂರಿ ಉತ್ಸವ ಮಾಡಬೇಕು ಎನ್ನುವ ಚರ್ಚೆ ಸಹ ನಡೆದಿದೆ ಎನ್ನಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top