ಕುಮಟಾ: ಅಭಿನೇತ್ರಿ ಆರ್ಟ್ ಟ್ರಸ್ಟ್ ನೀಲ್ಕೋಡ್ ವತಿಯಿಂದ ತಾಲೂಕಿನ ಹೊಳೆಗದ್ದೆಯ ಗೋಗ್ರೀನ್‌ನಲ್ಲಿ ಏಳು ದಿನಗಳು ಯಶಸ್ವಿಯಾಗಿ ನಡೆದ ಕಲಾಸಂಗಮ ತಾಳಮದ್ದಳೆ-ಯಕ್ಷಗಾನ ಕಾರ್ಯಕ್ರಮಕ್ಕೆ ತೆರೆಬಿದ್ದಿದೆ.
ಅಭಿನೇತ್ರಿ ಆರ್ಟ್ ಟ್ರಸ್ಟ್ ನೀಲ್ಕೋಡ್ ಅಧ್ಯಕ್ಷ ಶಂಕರ ಹೆಗಡೆ ಅವರ ನೇತೃತ್ವದಲ್ಲಿ ಏಳು ದಿನಗಳು ನಡೆದ ಕಲಾಸಂಗಮ ಕಾರ್ಯಕ್ರಮದಲ್ಲಿ ಪ್ರತಿದಿನ ಪ್ರಸಿದ್ಧ ಕಲಾವಿದರ ತಂಡದಿಂದ ತಾಳಮದ್ದಳೆ-ಯಕ್ಷಗಾನ ಪ್ರದರ್ಶನಗೊಂಡಿದೆ. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಭಟ್ಕಳ ಶಾಸಕ ಸುನೀಲ ನಾಯ್ಕ ಮಾತನಾಡಿ, ಕಲಾವಿದರಿಗೆ ವೇದಿಕೆ ಒದಗಿಸಿಕೊಡುವ ಜೊತೆಗೆ ಗೌರವಿಸುವ ಇಂತಹ ಕಲಾಸಂಗಮ ಕಾರ್ಯಕ್ರಮ ಸಂಘಟಿಸಿದ ಶಂಕರ ಹೆಗಡೆ ಅವರ ಕಾರ್ಯವನ್ನು ನಿಜಕ್ಕೂ ಶ್ಲಾಘಿಸಲೇ ಬೇಕು. ತಾಳಮದ್ದಳೆ-ಯಕ್ಷಗಾನ ಶ್ರೇಷ್ಠ ಕಲೆಯಾಗಿದ್ದು, ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಈ ಕಲೆಗಳು ತನ್ನದೇಯಾದ ಕೊಡುಗೆ ನೀಡಿವೆ. ಕನ್ನಡ ಭಾಷೆಯ ಶ್ರೀಮಂತಿಕೆಗೂ ಈ ಕಲೆಗಳೆ ಕಾರಣ. ಹಾಗಾಗಿ ತಾಳಮದ್ದಳೆ-ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಭಿನೇತ್ರಿ ಆರ್ಟ್ ಟ್ರಸ್ಟ್ ನೀಲ್ಕೋಡ್ ಅಧ್ಯಕ್ಷ ಶಂಕರ ಹೆಗಡೆ ಅವರು, ಜೀವಮಾನದಲ್ಲಿ ಸಾಧನೆ ಮಾಡಿದ ಮೂವರಿಗೆ ಪ್ರಶಸ್ತಿ ನೀಡಿದ್ದೇವೆ. ಅಭಿನೇತ್ರಿ ಆರ್ಟ್ ಟ್ರಸ್ಟ್ ಮೂಲಕ ಕಲಾವಿದರಿಗೆ ಸಾಕಷ್ಟು ನೆರವು ನೀಡಿದ್ದೇವೆ. ಅದು ನನ್ನದೊಬ್ಬನ ಸಾಧನೆ ಅಲ್ಲ. ಇಡೀ ಟ್ರಸ್ಟ್ನ ಸಾಧನೆ. ಹಾಗಾಗಿ ಜಿಲ್ಲೆಯ ಕಲಾವಿದರಿಗೆ ಸಹಾಯವಾಗಲಿ ಎಂಬ ಕಾರಣಕ್ಕೆ ಆಡಿಟೋರಿಯಂ ನಿರ್ಮಿಸುವ ಹಂಬಲ ನನ್ನದು. ಅದಕ್ಕೆ ನೀವೆಲ್ಲ ಕೈಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಭಿನೇತ್ರಿ ಪ್ರಶಸ್ತಿಯನ್ನು ಹಿರಿಯ ಸ್ತ್ರಿ ವೇಷಧಾರಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ ಎ ನಾಯ್ಕ ಮಂದರ್ತಿ ಅವರಿಗೆ ಪ್ರದಾನ ಮಾಡಲಾಯಿತು. ಬೆಳೆಯೂರು ಕೃಷ್ಣಮೂರ್ತಿ ಪ್ರಶಸ್ತಿಯನ್ನು ಯಕ್ಷಗಾನದ ಸವ್ಯಸಾಚಿ ವೇಷಧಾರಿ ಅಶೋಕ ಭಟ್ ಸಿದ್ದಾಪುರ ಅವರಿಗೆ ಮತ್ತು ಕಣ್ಣಿ ಪ್ರಶಸ್ತಿಯನ್ನು ಸೆಳೆಮಿಂಚಿನ ಪುಂಡು ವೇಷಧಾರಿಯಾದ ಕೊಳಲಿ ಕೃಷ್ಣ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು. ಉಡುಪಿಯ ಕಲಾರಂಗಕ್ಕೆ 50 ಸಾವಿರ ಗೌರವಧನ ಮತ್ತು ರಘುಪತಿ ನಾಯ್ಕ ಹೆಗ್ಗರಣಿ ಅವರಿಗೆ ಸಹಾಯ ಧನ ಸಮರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡ ಕಲ್ಲೂರು ಪ್ರತಿಷ್ಠಾನ ಅಧ್ಯಕ್ಷ ಎಸ್ ಪ್ರದೀಪಕುಮಾರ ಕಲ್ಲೂರು, ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ ಗಂಗಾಧರ ರಾವ್ , ಯಕ್ಷಧಾಮದ ಎಚ್ ಜನಾರ್ಧನ ಹಂದೆ , ಉದ್ಯಮಿ ನಿರಂಜನ್ ಜೈನ್, ಡಾ. ಆಶಿಕ್ ಕುಮಾರ ಹೆಗಡೆ, ಚಂದ್ರಶೇಖರ ಹೆಗಡೆ, ವಕೀಲ ಸತೀಶ ಭಟ್ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಅಭಿಮಾನದ ನುಡಿಗಳನ್ನಾಡಿದರು.
ಸಮಾರೋಪದ ಅಧ್ಯಕ್ಷತೆ ವಹಿಸಿದ್ದ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ಅಭಿನೇತ್ರಿ ಆರ್ಟ್ ಟ್ರಸ್ಟ್ ಯಕ್ಷಗಾನದ ಸೇವೆ ಮಾಡುತ್ತಿದೆ. ಅಶಕ್ತ ಕಲಾವಿದರಿಗೆ ಈ ಟ್ರಸ್ಟ್ ಆಸರೆಯಾಗಿದೆ. ದುಡ್ಡಿದ್ದವರೆಲ್ಲ ದಾನಿಗಳಾಗಲ್ಲ. ಶಂಕರ ಹೆಗಡೆಯಂತವರು ಮಾತ್ರ ತಮ್ಮ ದುಡಿಮೆಯಲ್ಲಿ ಕೆಲ ಭಾಗವನ್ನು ದಾನ ಮಾಡುವ ಕಾರ್ಯವನ್ನು ರೂಢಿಸಿಕೊಂಡಿದ್ದಾರೆ. ಇಂತವರೂ ಬಲೂ ಅಪರೂಪ. ಇವರು ಸಂಘಟಿಸುವ ಕಾರ್ಯಕ್ಕೆ ಕೈಲಾದ ಸಹಕಾರ ನೀಡಬೇಕು. ಕನ್ನಡ ಭಾಷೆಯ ಶುದ್ಧತೆಗೆ ಯಕ್ಷಗಾನ ಕಲೆಯೇ ಕಾರಣ. ಅಂಥ ಕಲೆಯನ್ನು ನಾವೆಲ್ಲ ಪ್ರೋತ್ಸಾಹಿಸುವ ಮೂಲಕ ಮುಂದಿನ ತಲೆಮಾರಿಗೆ ದಾಟಿಸುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎಚ್ ಸುಜಯೀಂದ್ರ ಹಂದೆ ಅವರು ಅಭಿನಂದನಾ ನುಡಿಯನ್ನಾಡಿದರು. ಬಳಿಕ ನಡೆದ ಸುಭದ್ರಾ ಕಲ್ಯಾಣ ಯಕ್ಷಗಾನ ಕಲಾ ಪ್ರೇಕ್ಷಕರ ಮನಸೂರೆಗೊಂಡಿತು.