ಶಿರಸಿ; ಕೆಟ್ಟ ಹವ್ಯಾಸಗಳು ಮೊದಲು ಹವ್ಯಾಸವಾಗಿ ನಂತರ ಚಟವಾಗಿ ನಂತರದಲ್ಲಿ ಅದಕ್ಕೆ ದಾಸನಾಗಿ ವ್ಯಕ್ತಿ ತನ್ನ ಜೀವನವನ್ನು ಹಾಳು ಮಾಡಿಕೊಳ್ಳುತ್ತಾನೆ. ಅದಕ್ಕಾಗಿ ಉತ್ತಮ ಹವ್ಯಾಸವನ್ನು ಮೈಗೂಡಿಸಿಕೊಳ್ಳಿ ಎಂದು ಡಾ|| ದಿನೇಶ ಹೆಗಡೆ ಇವರು ಹೇಳಿದರು.
ಅವರು ನಗರದ ಸರ್ಕಾರಿ ಮಾರಿಕಾಂಬಾ ಪದವಿ ಪೂರ್ವ ಕಾಲೇಜು, ಶಿರಸಿಯಲ್ಲಿ ಅರುಣೋದಯ ಸಂಸ್ಥೆಯವರು ಸಂಘಟಿಸಿದ್ದ ವಿದ್ಯಾರ್ಥಿಗಳಲ್ಲಿ ವ್ಯಸನಗಳ ವಿರುದ್ದ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾರಿಕಾಂಬಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಾಲಚಂದ್ರ ಭಟ್ ಮಾತನಾಡಿ ಇವತ್ತು ಜಗತ್ತಿನಲ್ಲಿ ನೆಡೆಯುವ ಹೆಚ್ಚಿನ ಕ್ರೈಮ್ಗಳಲ್ಲಿ ವ್ಯಸನಗಳಿಗೆ ದಾಸರಾದ ಯುವಜನತೆಯ ಪಾಲ್ಗೊಳ್ಳುವಿಕೆಯನ್ನು ನೋಡುತ್ತಿದ್ದೇವೆ. ಕೆಟ್ಟ ಹವ್ಯಾಸಗಳಿಗೆ ಹಣ ಹೊಂದಿಸಲು ಇಂತಹ ಕೃತ್ಯ ಎಸಗುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮುತ್ತುಸ್ವಾಮಿ ರಾಮಸ್ವಾಮಿ ಗೌಡರ್ ಮಾತನಾಡಿ ಎಲ್ಲದಕ್ಕೂ ಉತ್ತಮ ಆರೋಗ್ಯ ಮುಖ್ಯ. ಉತ್ತಮ ಆರೋಗ್ಯಕ್ಕಾಗಿ ಉತ್ತಮರೊಡನೆ ಸ್ನೇಹ ಮಾಡಿ ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಿ ಎಂದರು.
ಅರುಣೋದಯ ಸಂಸ್ಥೆಯ ಸಂಸ್ಥಾಪಕ ಸತೀಶ ನಾಯ್ಕ ಮಾತನಾಡಿ ನಮ್ಮ ಸಂಸ್ಥೆ ವಿದ್ಯಾರ್ಥಿಗಳಲ್ಲಿ ವ್ಯಸನಗಳ ವಿರುದ್ದ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಅನೇಕ ವರ್ಷಗಳಿಂದ ಮಾಡಿಕೊಂಡು ಬಂದಿದ್ದು, ವಿದ್ಯಾರ್ಥಿಗಳನ್ನು ಮುಂದಿನ ಜವಾಬ್ದಾರಿ ನಾಗರಿಕರನ್ನಾಗಿ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲಿದೆ ಎಂದು ಹೇಳಿದರು. ವೇದಿಕೆಯಲ್ಲಿ ಕುಮಾರಿ ಕೃಪಾ ನಾಯ್ಕ, ಸವಿತಾ ಮಂಡೂರು, ಉಪಸ್ಥಿತರಿದ್ದರು.
ಅರುಣೋದಯ ಸಂಸ್ಥೆಯ ಟ್ರಷ್ಟಿ ಸುಭಾಶ ಮಂಡೂರು ಸ್ವಾಗತಿಸಿದರು, ವಿನಾಯಕ ಶೇಟ ವಂದಿಸಿದರು, ಚಂದ್ರಕಾಂತ ಪವಾರ ಕಾರ್ಯಕ್ರಮ ನಿರ್ವಹಿಸಿದರು.