ಕಾರವಾರ: ಸದ್ಯ ದೇಶದಲ್ಲಿ ಹಿಂದು, ಮುಸ್ಲೀಂ ಎನ್ನುವ ಗಲಭೆ ಹಲವೆಡೆ ನಡೆಯುತ್ತಿದೆ. ಅದರಲ್ಲೂ ನಮ್ಮ ರಾಜ್ಯದಲ್ಲಿ ಇಂತಹ ಪ್ರಕರಣ ಹೆಚ್ಚಾಗಿದ್ದು ಕರಾವಳಿ ಜಿಲ್ಲೆಗಳಲ್ಲಿ ಕೋಮುಗಲಭೆಯೇ ಚುನಾವಣೆಯ ಪ್ರಮುಖ ಅಸ್ತ್ರಸಹ ಆಗಿದೆ. ಆದರೆ ಕರಾವಳಿ ನಗರಿ ಕಾರವಾರದಲ್ಲಿ ಹಿಂದೂ ಯುವಕರ ಜೊತೆ ಮುಸಲ್ಮಾನ ಯುವಕರೇ ಕೃಷ್ಣ ಮೂರ್ತಿ ಪ್ರತಿಷ್ಟಾಪಿಸಿ ಪ್ರತಿನಿತ್ಯ ಪೂಜೆ ನೆರವೇರಿಸುವ ಮೂಲಕ ಗಮನ ಸೆಳೆದಿದ್ದಾರೆ.
ನಗರದ ಕೆ.ಹೆಚ್.ಬಿ ಕಾಲೋನಿಯಲ್ಲಿ ಇದೇ ಪ್ರಥಮ ಬಾರಿಗೆ ಕೃಷ್ಣಮೂರ್ತಿಯನ್ನ ಪ್ರತಿಷ್ಟಾಪನೆ ಮಾಡಿದ್ದಾರೆ. ದಸರಾ ಮುಗಿದ ನಂತರ ಸಾಮಾನ್ಯವಾಗಿ ಕಾರವಾರ ಹಾಗೂ ಅಂಕೋಲಾ ತಾಲೂಕಿನ ಹಲವೆಡೆ ಕೃಷ್ಣಮೂರ್ತಿ ಪ್ರತಿಷ್ಟಾಪಿಸಲಾಗುತ್ತದೆ. ಈ ಬಾರಿ ಕೆ.ಹೆಚ್.ಬಿ ಕಾಲೋನಿಯಲ್ಲಿ ಪ್ರತಿಷ್ಟಾಪನೆ ಮಾಡಿರುವ ಕೃಷ್ಣ ಮಾತ್ರ ಕೋಮು ಸಾಮರಸ್ಯವನ್ನ ಮೂಡಿಸಿದೆ. ಕೆ.ಹೆಚ್.ಬಿ ಕಾಲೋನಿಯ ಕೆಲ ಯುವಕರ ಜೊತೆ, ಮಹಮ್ಮದ್ ಷಾ, ಶಾರುಕ್, ಸಿದ್ದಿಕ ಷಾ ಎನ್ನುವ ಮುಸಲ್ಮಾನ ಯುವಕರು ಈ ಕೃಷ್ಣ ಮೂರ್ತಿಯನ್ನ ಪ್ರತಿಷ್ಟಾಪಿಸಿದ್ದಾರೆ. ಪ್ರತಿಷ್ಟಾಪನೆ ಮಾಡಿರುವ ಯುವಕರು ಕಮಿಟಿಯೊಂದನ್ನ ರಚಿಸಿಕೊಂಡಿದ್ದು ಈ ಕಮಿಟಿಯ ಅಧ್ಯಕ್ಷ ಸಹ ಮುಸಲ್ಮಾನನಾಗಿದ್ದಾನೆ.
ಪ್ರತಿದಿನ ಬೆಳಿಗ್ಗೆಯಿಂದ ರಾತ್ರಿಯವರೆಗೂ ಇದೇ ಯುವಕರು ದೇವರನ್ನ ಕಾಯುವುದರ ಜೊತೆಗೆ ಪೂಜೆಯನ್ನ ಸಹ ತಾವೇ ಮಾಡುತ್ತಾರೆ. ಸಾರ್ವಜನಿಕವಾಗಿ ಮೂರ್ತಿ ಪ್ರತಿಷ್ಟಾಪಿಸಿರುವುದರಿಂದ ಕೆಲ ಸಾರ್ವಜನಿಕರು ಬಂದು ಪೂಜೆ ಒಂದೊಂದು ದಿನ ಪೂಜೆ ಮಾಡಿದರೆ, ಉಳಿದ ದಿನ ಈ ಕೃಷ್ಣನಿಗೆ ಮುಸಲ್ಮಾನ ಯುವಕರ ಪೂಜೆಯೇ ನಡೆಯುತ್ತದೆ. ಕಳೆದ ಅಕ್ಟೋಬರ್ 26ಕ್ಕೆ ಕೃಷ್ಣಮೂರ್ತಿಯನ್ನ ಪ್ರತಿಷ್ಟಾಪಿಸಿದ್ದು ಒಂದು ತಿಂಗಳ ಕಾಲ ಮೂರ್ತಿಯನ್ನ ಇಟ್ಟು ಪೂಜೆ ಮಾಡಲಾಗುತ್ತಿದೆ. ಇನ್ನು ಪ್ರತಿನಿತ್ಯ ಪೂಜೆ ಯಾರು ಮಾಡಲಾಗುವುದು ಎನ್ನುವ ಬೋರ್ಡನ್ನ ಸಹ ಸ್ಥಳದಲ್ಲಿ ಹಚ್ಚಿದ್ದು ಅದರಲ್ಲಿ ಮೂರು ದಿನ ಮುಸಲ್ಮಾನರು ಪೂಜೆ ನಡೆಸುವ ಬಗ್ಗೆ ಸಹ ಹೆಸರನ್ನ ಹಾಕಿದ್ದಾರೆ.
ಹಿಂದೂ ಮುಸ್ಲಿಂ ಎಂದು ಕಿತ್ತಾಟ ಮಾಡುವ ಕಾಲದಲ್ಲಿ, ಧರ್ಮ, ಜಾತಿ ಎನ್ನುವ ಯಾವುದೇ ಬೇದ ಭಾವ ವಿಲ್ಲದೇ ಎರಡು ಧರ್ಮದ ಯುವಕರು ಒಂದಾಗಿ ದೇವರ ಸನ್ನಿದಿಯಲ್ಲಿ ಪೂಜೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಬಹುತೇಕ ಎಲ್ಲಾ ಯುವಕರು ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಾರೆ. ಹಿಂದಿನಿಂದಲೂ ಎರಡು ಧರ್ಮದ ಸ್ನೇಹಿತರು ಗುಂಪೊಂದನ್ನ ಮಾಡಿಕೊಂಡಿದ್ದು ಕೃಷ್ಣ ಮೂರ್ತಿ ಇಡಬೇಕು ಎನ್ನುವ ಮಹದಾಸೆ ಈ ಗುಂಪಿನವರಿಗೆ ಇದ್ದಿದ್ದು ಇದೇ ಹಿನ್ನಲೆಯಲ್ಲಿ ಈ ಬಾರಿ ಮೂರ್ತಿ ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ.
ಸಣ್ಣ ಸಣ್ಣ ವಿಚಾರಗಳೂ ಕೋಮು ಭಾವನೆಗೆ ದಕ್ಕೆ ಬರುವಂತಹ ಕಾಲದಲ್ಲಿ ಮುಸಲ್ಮಾನ ಯುವಕರು ಹಿಂದೂ ದೇವರನ್ನ ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸುವ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ವಿಶೇಷ ಎಂದರೆ ಈ ಯುವಕರು ತಾವು ಮುಸಲ್ಮಾನರು ಎಂದು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ, ಹಾಗೇ ಅವರ ಹಿಂದೂ ಸ್ನೇಹಿತರು ಅವರನ್ನ ಮುಸಲ್ಮಾನರು ಎಂದು ಹೇಳುವುದಿಲ್ಲ. ನಾವೆಲ್ಲ ಒಂದೇ, ನಮ್ಮಲ್ಲಿ ಇರುವುದು ಒಂದೇ ರಕ್ತ ಎನ್ನುವುದು ಈ ಯುವಕರ ಗುಂಪಿನವರ ಅಭಿಪ್ರಾಯ.
ನಮ್ಮಲ್ಲಿ ಹಿಂದೂ ಮುಸ್ಲಿಂ ಎನ್ನುವ ಭೇದಭಾವವಿಲ್ಲ. ನಾನು ಚಿಕ್ಕ ವಯಸ್ಸಿನಿಂದಲೂ ಹಿಂದು ಸ್ನೇಹಿತರ ಜೊತೆಯಲ್ಲಿಯೇ ಬೆಳೆದಿದ್ದೇನೆ. ನಮ್ಮ ರಂಜಾನ್ ಹಬ್ಬಕ್ಕೆ ಹಿಂದು ಸ್ನೇಹಿತರು ನಮ್ಮ ಮನೆಗೆ ಬಂದು ಆಚರಿಸುತ್ತಾರೆ. ಹಾಗೇ ಹಿಂದುಗಳ ಹಬ್ಬಕ್ಕೆ ನಾವೆಲ್ಲಾ ಹೋಗಿ ಆಚರಿಸುತ್ತೇವೆ. ಕೃಷ್ಣ ಮೂರ್ತಿ ಇಟ್ಟು ಪೂಜೆ ಮಾಡುವುದು ನಮಗೆ ಖುಷಿ ಕೊಡುತ್ತಿದೆ. ಒಮ್ಮೆಯೂ ನಾವು ಬೇರೆ ಧರ್ಮ ಎಂದು ನೋಡಿಲ್ಲ ಎಂದು ಮಹಮ್ಮದ್ ಷಾ ಹೇಳಿದರು .