ದಾಂಡೇಲಿ: ಕಾಡಾನೆಗಳ ಹಿಂಡೊಂದು ಕಬ್ಬು ಹಾಗೂ ಭತ್ತದ ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಮಾಡಿದ ಘಟನೆ ತಾಲೂಕಿನ ಬೇಡರಶಿರಗೂರು ಗ್ರಾಮದಲ್ಲಿ ನಡೆದಿದೆ.
ಕಳೆದೆರಡು ದಿನಗಳಿಂದ ರಾತ್ರಿ ವೇಳೆಯಲ್ಲಿ ಆನೆಗಳು ಬೇಡರಶಿರಗೂರಿನಲ್ಲಿರುವ ಕಬ್ಬು ಮತ್ತು ಭತ್ತದ ಗದ್ದೆಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದು, ಸ್ಥಳೀಯ ರೈತರು ಆತಂಕದಲ್ಲಿದ್ದಾರೆ. ಮೊದಲೆ ಅಕಾಲಿಕ ಮಳೆಯಿಂದಾಗಿ ಸಾಕಷ್ಟು ಒದ್ದಾಡುತ್ತಿರುವ ಸ್ಥಳೀಯ ರೈತರನ್ನು ಇದೀಗ ಆನೆಗಳ ಕಾಟ ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.
ಸ್ಥಳೀಯ ವಿಶ್ವನಾಥ ಕೊರವಿ, ಲಾಡು ಗೋಪಾಲ ಕೊರವಿ, ಉದಯ ಎಂ.ನಾಯ್ಕ, ವಿಠ್ಠಲ ಗೋಪಾಲ ಕೊರವಿ, ಜಯದೇವ ಗೋಪಾಲ ಕೊರವಿ ಮತ್ತು ದಶರಥ ಕೊರವಿ ಮೊದಲಾದವರ ಕಬ್ಬು ಮತ್ತು ಭತ್ತದ ಗದ್ದೆಗಳಿಗೆ ಆನೆಗಳು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಮಾಡಿದೆ. ಆನೆಗಳ ದಾಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.