ದಾಂಡೇಲಿ: ನದಿಗಿಳಿಯದಿರಿ, ಮೊಸಳೆಯಿದೆ ಎಚ್ಚರಿಕೆ ಎಂದು ಎಚ್ಚರಿಕೆಯ ಫಲಕವನ್ನು ಹಾಕಿದ್ದರೂ ಅದನ್ನು ಉಲ್ಲಂಘಿಸಿ ನದಿಗಿಳಿದ ಯುವಕರ ತಂಡವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಿಡಿದು ಎಚ್ಚರಿಕೆ ನೀಡಿ, ತಪ್ಪೊಪ್ಪಿಗೆ ಬರೆಸಿಕೊಂಡ ಘಟನೆ ಬೈಲುಪಾರ್ ಬಳಿ ನಡೆದಿದೆ.
ನಗರದ ಬೈಲುಪಾರಿನ ಸೇತುವೆಯ ಹತ್ತಿರವೆ ನದಿಗಿಳಿಯದಿರಿ, ಮೊಸಳೆಗಳಿವೆ ಎಂಬ ಎಚ್ಚರಿಕೆಯ ನಾಮಫಲಕವನ್ನು ಹಾಕಲಾಗಿದ್ದರೂ, ಅದನ್ನು ಮೀರಿ ಈ ತಂಡ ನದಿಗಿಳಿದು ಸ್ನಾನ ಮಾಡುತ್ತಿತ್ತು. ಧಾರವಾಡ ಜಿಲ್ಲೆಯ ಸವಣೂರಿನಿಂದ ಬಂದಿದ್ದ ಯುವಕರ ತಂಡ ನದಿಗಿಳಿದಿತ್ತು. ಇದನ್ನು ಗಮನಿಸಿದ ದಾಂಡೇಲಿ ಮತ್ತು ವಿರ್ನೋಲಿ ವಲಯದ ವಲಯಾರಣ್ಯಾಧಿಕಾರಿ ಅಪ್ಪರಾವ್ ಕಲಶೆಟ್ಟಿ ಮತ್ತು ಸಂಗಮೇಶ ಪಾಟೀಲ್ ಅವರ ನೇತೃತ್ವದ ಅರಣ್ಯ ಇಲಾಖೆಯ ಸಿಬ್ಬಂದಿ ತಂಡ ನದಿಗಿಳಿದಿದ್ದ ಯುವಕರ ಯುವಕರನ್ನು ಹಿಡಿದು, ಅವರಿಗೆ ಎಚ್ಚರಿಕೆ ನೀಡಿ, ಆನಂತರ ತಪ್ಪೊಪ್ಪಿಗೆ ಪತ್ರವನ್ನು ಬರೆಸಿಕೊಂಡಿದ್ದಾರೆ.