ಕಾರವಾರ: ಅಧಿಕಾರಿಗಳ ವರ್ಗಾವಣೆ ಸಹಜ ಪ್ರಕ್ರಿಯೆ ಆಗಿದ್ದರೂ ಸಹ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಅವರು ರಾಜಕಾರಣಿಗಳಿಗೆ ನುಂಗಲಾರದ ತುತ್ತಾಗಿದ್ದಕ್ಕೆ ಒಂದು ವರ್ಷ ಪೂರೈಸುತ್ತಿದ್ದಂತೆ ವರ್ಗಾವಣೆಗೊಳ್ಳುವ ಪ್ರಸಂಗ ಬಂದಿದೆ. ಹೀಗಾಗಿ ಈ ಬಗ್ಗೆ ಜನ ಎಚ್ಚೆತ್ತುಕೊಳುವ ಅನಿವಾರ್ಯತೆ ಎದುರಾಗಿದೆ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಹೇಳಿದ್ದಾರೆ.
ಡಾ.ಪೆನ್ನೇಕರ್ ಅವರು ಮಟಕಾ, ಗಾಂಜಾದಂಥ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ದರು. ಚುನಾವಣೆ ಸಮೀಪಿಸಿರುವುದರಿಂದ ದಕ್ಷ, ನಿಷ್ಠಾವಂತ ಅಧಿಕಾರಿ ಡಾ.ಪೆನ್ನೇಕರ್ ಜನಪ್ರತಿನಿಧಿಗಳಿಗೆ ನುಂಗಲಾರದ ತುತ್ತಾಗಿದ್ದರು. ಇವರ ವರ್ಗಾವಣೆಗೆ ಪ್ರಯತ್ನ ಸಾಗಿದೆ ಎಂಬ ಸುದ್ದಿ ತಿಳಿದು ಡಿಜಿಯವರನ್ನು ಈ ಬಗ್ಗೆ ಬೆಂಗಳೂರಿನಲ್ಲಿ ಭೇಟಿಯಾಗಲು ಹೋದಾಗ ಎಡಿಜಿಪಿ ಸಲೀಂ ಎನ್ನುವವರೊಂದಿಗೆ ಮಾತನಾಡಿದ್ದೆವು. ಅವರು ಎಸ್ಪಿ ವರ್ಗಾವಣೆ ನಮ್ಮ ಕೈನಲ್ಲಿ ಇರುವುದಿಲ್ಲ. ಅದು ಮುಖ್ಯ ಕಾರ್ಯದರ್ಶಿಗಳ ಕೈನಲ್ಲಿರುತ್ತದೆ. ಡಿವೈಎಸ್‌ಪಿಯವರೆಗಿನದ್ದು ಮಾತ್ರ ನಮಗೆ ಸಂಬಂಧಿಸಿದ್ದು. ಇವರದ್ದೆಲ್ಲ ವಿಧಾನಸೌಧದಲ್ಲೇ ಆಗುವುದರಿಂದ ನಮಗೆ ಮನವಿ ಕೊಟ್ಟರೂ ಏನೂ ಮಾಡಲಾಗುವುದಿಲ್ಲ. ಹೀಗಾಗಿ ಅಲ್ಲಿ ಪ್ರಯತ್ನಿಸಿ ಎಂದಿದ್ದರು.
ಆಡಳಿತ ಪಕ್ಷದ ಕೆಲವರೇ ಈ ಚಟುವಟಿಕೆಗಳಲ್ಲಿ ಇದ್ದಿದ್ದರಿಂದ ಇವರ ವರ್ಗಾವಣೆ ತಡೆಗೆ ಕೋರಿ ಹೆಚ್ಚಿನ ಒತ್ತಡ ಹೇರಿದರೂ ಪ್ರಯೋಜನವಿರಲಿಲ್ಲ ಎಂಬುದು ನಮ್ಮ ಅರಿವಿಗೆ ಬಂದಿತ್ತು. ಹೀಗಾಗಿ ಈ ಬಗ್ಗೆ ಜನರೇ ಎಚ್ಚೆತ್ತುಕೊಳ್ಳಬೇಕು. ಆಡಳಿತ ಹೇಗಿದೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದಿದ್ದಾರೆ.