ಸಿದ್ದಾಪುರ: ತಾಲೂಕಿನಲ್ಲಿ ಇನ್ನೂ ಹಲವಾರು ಅಂಗನವಾಡಿ ಹಾಗೂ ಶಾಲೆಗಳು ಮಣ್ಣಿನ ಗೋಡೆಯ ಕಟ್ಟಡದಲ್ಲಿವೆ. ಸುಮಾರು 15 ವರ್ಷಗಳಿಂದ ಶಾಸಕರಾಗಿ, ಮಂತ್ರಿಗಳಾಗಿ ಸಭಾಧ್ಯಕ್ಷರಾಗಿರುವ ಇವರ ಗಮನಕ್ಕೆ ಇದು ಇಲ್ಲವೇ ? ತಾಲೂಕಿಗೆ ಭೇಟಿ ನೀಡಿದಾಗಲೆಲ್ಲ ನಿರಂತರ ಅಭಿವೃದ್ಧಿ ಮಾಡುವುದು ನನ್ನ ಗುರಿ ಎಂಬ ಭಾಷಣವನ್ನು ಮಾಡುತ್ತಾರೆ. ತಾಲೂಕಿನ ಎಲ್ಲಾ ರಸ್ತೆಗಳ ರಿಪೇರಿ ಅಂಗನವಾಡಿ ಹಾಗೂ ಶಾಲಾ ಕಟ್ಟಡಗಳ ರಿಪೇರಿ ಬಗ್ಗೆ ನನಗೆ ಗೊತ್ತಿದೆ ಅಂತ ಹೇಳುತ್ತಾರೆ. ಆದರೆ ಜನಸ್ಪಂದನ ಸಭೆ ನಡೆಸದ ಶಾಸಕರಿಂದ ತಾಲೂಕಿನಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದನೆ ಇಲ್ಲ.ಅಭಿವೃದ್ಧಿ ಕಾಮಗಾರಿಗಳು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಹಲಗೇರಿಯಿಂದ ಪಾದಯಾತ್ರೆ ನಡೆಸಿ ಪ್ರತಿಭಟಿಸುತ್ತೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನ್ಮನೆ ಹೇಳಿದರು.
ಅವರು ಈ ಕುರಿತು ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವರಿಸಿದರು. ತಾಲೂಕಿನ ಪಿಡಬ್ಲ್ಯೂಡಿ ಹಾಗೂ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದೆ.ಅಂಗನವಾಡಿ ಹಾಗೂ ಶಾಲಾ ಕಟ್ಟಡ ಆಗುತ್ತಿಲ್ಲ.ಜೆ.ಎಲ್.ಎಂ.ಜೆ ನೀರಿ ಪೂರೈಕೆ ಹಾಗೂ ಇಂತಹ ಅನೇಕ ಅಭಿವೃದ್ಧಿ ಕಾಮಗಾರಿಗಳು ಆಗುತ್ತಾ ಇಲ್ಲ. ನಾವು ಅಭಿವೃದ್ಧಿ ಮಾಡುತ್ತಾ ಇದ್ದೇವೆ ಅಂತ ಸ್ಥಳೀಯ ಶಾಸಕರು ಹೇಳಿಕೆ ನೀಡುತ್ತಿದ್ದಾರೆ. ಅವರು ಸೀಮಿತವಾಗಿ ಎಲ್ಲೋ ಒಂದು ಮೂಲೆಯಲ್ಲಿ ಅಭಿವೃದ್ಧಿ ಮಾಡುತ್ತಿದ್ದಾರೆ ಏನು ನಮಗೆ ಗೊತ್ತಿಲ್ಲ. ನಮ್ಮ ತಾಲೂಕಿನಲ್ಲಿ ಸಿದ್ದಾಪುರದಿಂದ ಸಾಗರ ಹೋಗುವಂಥ ಪಿಡಬ್ಲ್ಯೂಡಿ ರಸ್ತೆ ಜನ ಸಂಚಾರಕ್ಕೆ ಬಾರದಂತಾಗಿದೆ. ಹಿಂದೆ ನಮ್ಮ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಮೆಂಟೇನೆನ್ಸ್ ಸಲುವಾಗಿ ಹಣ ಬರುತ್ತಿತ್ತು ರಸ್ತೆ ಸಂಚಾರಕ್ಕೆ ಅಡ್ಡ ವಾಗುವ ಗಿಡಗಳನ್ನು ಕಟಿಂಗ್ ಮಾಡುತ್ತಿದ್ದರು. ರಸ್ತೆಯ ಗುಂಡಿಗಳನ್ನು ಮುಚ್ಚುತ್ತಿದ್ದರು. ಇವತ್ತು ಈ ತಾಲೂಕಿನಲ್ಲಿ ಅಂತ ಯಾವುದೇ ಕೆಲಸಗಳು ನಡೆಯುತ್ತಿಲ್ಲ.
ಗ್ರಾಮೀಣ ಭಾಗದಲ್ಲಿ ಎತ್ತರವಾದ ಅರಣ್ಯ ಪ್ರದೇಶದಲ್ಲಿ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಟ್ಯಾಂಕ್ ನಿಲ್ಲಿಸಲು ಅರಣ್ಯ ಇಲಾಖೆಯವರು ಅನುಮತಿ ಕೊಡುತ್ತಾ ಇಲ್ಲ. ಸ್ಥಳೀಯ ಶಾಸಕರು ಜನಪರ ಕೆಲಸಕ್ಕೆ ತೊಂದರೆ ಕೊಡದಂತೆ ಅರಣ್ಯ ಇಲಾಖೆಯವರಿಗೆ ಸೂಚಿಸಿರುವುದಾಗಿ ತಿಳಿಸುತ್ತಾರೆ. ಆದರೆ ಮೊನ್ನೆ ಕವಲುಕೊಪ್ಪದ ಮಂಜುನಾಥ್ ನಾಯ್ಕರವರು ತಮ್ಮ ಅತಿಕ್ರಮಣ ಜಮೀನಿನಲ್ಲಿ ನೆಟ್ಟ ಸುಮಾರು ಎರಡು ನೂರು ಅಡಿಕೆ ಸಸಿಗಳನ್ನು ಅರಣ್ಯ ಇಲಾಖೆಯವರು ಕಿತ್ತುಕೊಂಡು ಹೋಗಿದ್ದಾರೆ. ಇವೆಲ್ಲವೂ ಶಾಸಕರಿಗೆ ಕಾಣುತ್ತಿಲ್ಲವೆ.ಇವರು ಜನರಿಗೆ ಹೇಗೆ ಸ್ಪಂದಿಸುತ್ತಾರೆ ಎಂದರು.
ತಾಲೂಕಿನಲ್ಲಿ ಸುಮಾರು 67 ಶಾಲೆಯ ಕಟ್ಟಡಗಳು ಮಣ್ಣಿನ ಗೋಡೆಯನ್ನು ಹೊಂದಿವೆ. ಇವೆಲ್ಲ ಸುಮಾರು 50-60 ವರ್ಷಗಳ ಹಳೆಯ ಕಟ್ಟಡಗಳು , ಹೊಸಳ್ಳಿ , ಮನ್ಮನೆ, ಆಡುಕಟ್ಟ ಹಾಗೂ ಕೋಲಸಿರ್ಸಿ ಭಾಗದಲ್ಲಿ ಬೀಳುವ ಹಂತದಲ್ಲಿರುವ ಶಾಲೆಗಳನ್ನು ಡೆಮಾಲಿಶ್ ಮಾಡಬೇಕಾಗಿದೆ. ಹಲವಾರು ಶಾಲೆಗಳಲ್ಲಿ ಶೌಚಾಲಯಗಳಿಲ್ಲ. ತಾಲೂಕಿನಲ್ಲಿ ಸುಮಾರು 65 ಶಾಲೆಗಳಿಗೆ ಸುಸಜ್ಜಿತವಾದ ಶೌಚಾಲಯವಿಲ್ಲ.
ಪಟ್ಟಣದಲ್ಲಿ ಒಂದು ಕೋಟಿ 82 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಹಾಗೂ ಬ್ರಿಜ್ ಕಾಮಗಾರಿಯಾಗಿ ಕೇವಲ ಒಂದೇ ವರ್ಷದಲ್ಲಿ ಡ್ಯಾಮೇಜ್ ಆಗಿದೆ.ಇದು 40% ಸರ್ಕಾರದ ಕಾಮಗಾರಿ ಅಂತ ಹೇಳಬೇಕಾಗಿದೆ. ತಾಲೂಕಿನಲ್ಲಿ ಗುತ್ತಿಗೆದಾರರಿಗೆ ಕೋಟಿಗಟ್ಟಲೆ ಹಣ ಮಂಜೂರಿಯಾಗಬೇಕಾಗಿರುವ ಬಾಕಿ ಇದೆ. ಹಿರಿಯ ಗುತ್ತಿಗೆದಾರರಿಗೆ ಯಾರಿಗೂ ಬಿಲ್ ಆಗುತ್ತಿಲ್ಲ. ಇಲ್ಲಿಂದ ಬಿಲ್ ಮಾಡಿಸಿಕೊಂಡು ವಿಧಾನಸೌಧಕ್ಕೆ ಹೋಗಿ ಅಲ್ಲಿ ಸಂಬಂಧಪಟ್ಟ ಅಧಿಕಾರಿ ಹಾಗೂ ಮಿನಿಸ್ಟರ್ ಗಳಿಗೆ ಕಮಿಷನ್ ಕೊಟ್ಟಲ್ಲಿ ಮಾತ್ರ ಹಣ ಬಿಡುಗಡೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಬೇಕಾದಲ್ಲಿ ಆ ಕುರಿತು ದಾಖಲೆ ಒದಗಿಸುತ್ತೇವೆ ಎಂದರು.
ಶಾಸಕರು ಭ್ರಷ್ಟಾಚಾರ ನಾವು ಮಾಡುವುದಿಲ್ಲ ಅಂತ ಹೇಳುತ್ತಾರೆ ತಾಲೂಕಿನಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಣುತ್ತಿಲ್ಲ. ಸಿದ್ದಾಪುರ ಮೀನು ಮಾರುಕಟ್ಟೆಯಿಂದ ಭಗತ್ ಸಿಂಗ್ ಸರ್ಕಲ್ ವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದೆ. ಅಲ್ಲಿ ರಸ್ತೆಯ ದಿಬ್ಬವನ್ನು ತೆಗೆದು ಲೆವೆಲ್ ಮಾಡಿ ರಸ್ತೆಯನ್ನು ನಿರ್ಮಿಸಬೇಕು. ಈಗ ಇದ್ದ ಪರಿಸ್ಥಿತಿಯಲ್ಲಿ ರಸ್ತೆ ನಿರ್ಮಾಣ ಮಾಡುವುದಾಗಿ ಇಂಜಿನಿಯರ್ ಹೇಳುತ್ತಿದ್ದಾರೆ. ಈ ಕುರಿತು ಸಂಬಂಧಪಟ್ಟ ಇಂಜಿನಿಯರಿಗೆ ಈಗಾಗಲೇ ಲೆಟರ್ ಕೊಟ್ಟಿದ್ದೇವೆ. ಮಣ್ಣು ಲೆವೆಲ್ ಮಾಡಿ ರಸ್ತೆ ನಿರ್ಮಾಣ ಮಾಡದೆ ಹೋದಲ್ಲಿ ನಾವು ಪ್ರತಿಭಟನೆ ಮಾಡಿ ಆ ರಸ್ತೆ ಕಾಮಗಾರಿಯನ್ನು ನಿಲ್ಲಿಸುತ್ತೇವೆ. ಆದ್ದರಿಂದ ತಕ್ಷಣ ಆ ರಸ್ತೆಯನ್ನು ಸರಿಪಡಿಸಬೇಕು ಎಂದರು.ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಹಿಂದಿಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ವಿ.ಎನ್.ನಾಯ್ಕ ಬೇಡ್ಕಣಿ,ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಆರ್.ಹೆಗಡೆ ಕುಂಬಾರಕುಳಿ, ಪ್ರಧಾನ ಕಾರ್ಯದರ್ಶಿ ಸಿ.ಆರ್.ನಾಯ್ಕ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ನಾಸೀರ್ ಖಾನ್,ವಿವೇಕ ಸುಬ್ರಾಯ ಭಟ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೀಮಾ ಹೆಗಡೆ, ಜಿ.ಪಂ ಮಾಜಿ ಸದಸ್ಯೆ ಇಂದಿರಾ ನಾಯ್ಕ, ಪ್ರಮುಖರಾದ ಅಬ್ದುಲ್ ಸಾಬ್ ಹೇರೂರು, ರಾಜೇಶ ನಾಯ್ಕ ಕತ್ತಿ, ಗಾಂಧೀಜಿ ಆರ್.ನಾಯ್ಕ, ನಟರಾಜ ಜಿಡ್ಡಿ, ಸೀತಾರಾಮ ಗೌಡ, ಅರುಣ ನಾಯ್ಕ ಬಣಗಾರ,ಮಾರುತಿ ಕೀಂದ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.