ಶಿರಸಿ: ತಾಲೂಕಿನ ಇಸಳೂರಿನಲ್ಲಿ ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ, ಸೋಂದಾ ಇದರ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯಲ್ಲಿ 67 ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಶಿವರಾಮ ಭಟ್ ಅವರು ಮಾತನಾಡಿ ಕನ್ನಡ ನಾಡಿನ ಇತಿಹಾಸ, ಪ್ರಾಂತವಾರು ವಿಂಗಡಣೆ, ಹಾಗೂ ನಾಡು ನುಡಿಯ ಮಹತ್ವ ಮತ್ತು ಅದರ ರಕ್ಷಣೆಯಲ್ಲಿ ನಮ್ಮ ಪಾತ್ರದ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಚಾರ್ಯ ವಸಂತ ಭಟ್ ಅವರು ಮಾತನಾಡಿ ಕನ್ನಡ ನಾಡು,ನೆಲ,ಜಲದ ಮಹತ್ವವನ್ನು ತಿಳಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ವೇದಿಕೆಯಲ್ಲಿ ಶಾಲೆಯ ಹಿರಿಯ ಶಿಕ್ಷಕಿಯಾದ ಶ್ರೀಮತಿ ಸೀತಾ ಜೋಶಿ, ಕಾರ್ಯಕ್ರಮದಲ್ಲಿ ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕುಮಾರಿ ಪ್ರತೀಕ್ಷಾ ಭಟ್ ಸ್ವಾಗತಿಸಿದರೆ, ಕುಮಾರ ಸುಜನ್ ಹೆಗಡೆ ನಿರೂಪಿಸಿ, ಕುಮಾರ್ ಹರ್ಷಿತ್ ಭಾಗ್ವತ್ ವಂದಿಸಿದರು.