ಬೆಂಗಳೂರು : ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯುತ್ತಿದ್ದು, ವಿಡಿಯೋ ಕಾನ್ಪರೆನ್ಸ್ ಮೂಲಕ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ.
ಭಾರತದ ಶಕ್ತಿ ಇಡೀ ವಿಶ್ವಕ್ಕೆ ತಿಳಿದಿದೆ. ಕೊರೋನಾದಿಂದ ಇಡೀ ವಿಶ್ವವೇ ನಲುಗಿತ್ತು. ಭಾರತ ಆ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ ಆರ್ಥಿಕವಾಗಿ ಚೇತರಿಕೆ ಕಾಣುತ್ತಿದೆ. ಇದಕ್ಕೆ ನಮ್ಮ ದೇಶದ ಮಾನವ, ಪುಕೃತಿ, ಸಂಪನ್ಮೂಲ, ಸಂಸ್ಕೃತಿ, ತಂತ್ರಜ್ಞಾನ ಹಾಗೂ ವಿಜ್ಞಾನವೇ ಕಾರಣ ಎಂದಿದ್ದಾರೆ.
ಕರ್ನಾಟಕದಲ್ಲಿ ಅಪಾರವಾದ ಪ್ರಾಕೃತಿಕ, ಆರ್ಥಿಕ, ವಿಜ್ಞಾನ, ತಂತ್ರಜ್ಞಾನದ ಶಕ್ತಿ ಇದೆ. ಕರ್ನಾಟಕ ಇಡೀ ಜಗತ್ತನ್ನೇ ಸೆಳದಿದೆ. ಇಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚಾಗುತ್ತಿದೆ. ಸಂಪ್ರದಾಯ ಹಾಗೂ ತಂತ್ರಜ್ಞಾನ ಎರಡನ್ನೂ ನಾವು ಇಲ್ಲಿ ಕಾಣಬಹುದು. ಪ್ರತಿಭೆ ಹಾಗೂ ತಂತ್ರಜ್ಞಾನದ ಬಗ್ಗೆ ಮಾತನಾಡುವಾಗ ಮೊದಲು ಮನಸ್ಸಿಗೆ ಬರುವ ಊರು ಬ್ರ್ಯಾಂಡ್ ಬೆಂಗಳೂರು ಎಂದು ಹೇಳಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ಜಗತ್ಪ್ರಸಿದ್ಧ. ಇಲ್ಲಿ ಸಂಸ್ಕೃತಿ ಜೊತೆ ತಂತ್ರಜ್ಞಾನ ಇದೆ. ಭಾರತ ಅಭಿವೃದ್ಧಿಯಲ್ಲಿ ಕರ್ನಾಟಕದ ಕೊಡುಗೆ ಸಾಕಷ್ಟಿದೆ. ಇಲ್ಲಿ ಹೂಡಿಕೆ ಮಾಡಿದರೆ ಲಕ್ಷಾಂತರ ಜನರಿಗೆ ಉದ್ಯೋಗ ದೊರಕಲಿದೆ. ಅಷ್ಟೇ ಅಲ್ಲದೆ ದೇಶದ ಅರ್ಥವ್ಯವಸ್ಥೆ ಅಭಿವೃದ್ಧಿಯಾಗುತ್ತದೆ ಎಂದಿದ್ದಾರೆ.