ಕುಮಟಾ: ತಾಲೂಕಿನ ದೀವಗಿಯಲ್ಲಿ ಸರ್ವೀಸ್ ರಸ್ತೆ, ಮೇಲ್ಸೇತುವೆ, ಹೈಮಾಸ್ಟ್ ದೀಪಗಳ ಅಳವಡಿಕೆಯ ಬೇಡಿಕೆಗಳಲ್ಲಿ ಕೆಲ ಬೇಡಿಕೆಗಳನ್ನಾದರೂ ಶೀಘ್ರ ಈಡೇರಿಸಿಕೊಡುವ ಭರವಸೆಯನ್ನು ಶಾಸಕ ದಿನಕರ ಶೆಟ್ಟಿ ನೀಡಿದರು.
ತಾಲೂಕಿನ ದೀವಗಿಯಲ್ಲಿ ಸರ್ವೀಸ್ ರಸ್ತೆ, ಮೇಲ್ಸೇತುವೆ, ಹೈಮಾಸ್ಟ್ ದೀಪಗಳ ಅಳವಡಿಸುವಂತೆ ಆಗ್ರಹಿಸಿ ದೀವಗಿ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಅಲ್ಲಿನ ಗ್ರಾಮಸ್ಥರು ಹೋರಾಟ ಶುರು ಮಾಡಿದ್ದು, ತಮ್ಮ ಬೇಡಿಕೆಗಳಿಗೆ ಐಆರ್‌ಬಿ ಮತ್ತು ಜಿಲ್ಲಾಡಳಿತ ಸ್ಪಂದಿಸದಿದ್ದರೆ ಪ್ರತಿಭಟನೆಯನ್ನು ಉಗ್ರಗೊಳಿಸುವ ಚಿಂತನೆಯನ್ನು ಅಲ್ಲಿನ ಗ್ರಾಮಸ್ಥರು ನಡೆಸಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಶಾಸಕ ದಿನಕರ ಶೆಟ್ಟಿ ಅವರು, ದೀವಗಿಗೆ ಭೇಟಿ ನೀಡಿ ದೀವಗಿ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಊರಿನ ಪ್ರಮುಖರನ್ನೆಲ್ಲ ಕರೆದು ತುರ್ತು ಸಭೆ ನಡೆಸಿ, ಚರ್ಚಿಸಿದರು. ದೀವಗಿ ಗ್ರಾಮಸ್ಥರಿಗೆ ತೀರಾ ಅವಶ್ಯಕವಾಗಿರುವ ಸರ್ವೀಸ್ ರಸ್ತೆ ಹಾಗೂ ಹೈಮಾಸ್ಕ್ ಲ್ಯಾಂಪ್ ವ್ಯವಸ್ಥೆಯನ್ನು ಅತೀ ಶೀಘ್ರವಾಗಿ ಮಾಡಿಸಿಕೊಡುವುದಾಗಿ ಭರವಸೆಯನ್ನು ನೀಡಿದ ಶಾಸಕರು, ಇನ್ನು ಮೇಲ್ಸೇತುವೆಗೆ ಹೆಚ್ಚಿನ ಹಣದ ಅವಶ್ಯಕತೆ ಇರುವುದರಿಂದ ಅದರ ಮಂಜೂರಿಗೆ ಸ್ವಲ್ಪ ವಿಳಂಬವಾಗಬಹುದು. ಅದನ್ನೂ ಮಾಡಿಸುವ ಪ್ರಯತ್ನ ಮಾಡೋಣ. ನಿಮ್ಮ ನ್ಯಾಯಯುತವಾದ ಯಾವುದೇ ಬೇಡಿಕೆ ಈಡೇರಿಸಿಕೊಳ್ಳಲು ಮಾಡುವಂತ ಹೋರಾಟಕ್ಕೆ ನಾನು ಸದಾ ನಿಮ್ಮ ಜೊತೆಗೆ ಬರುತ್ತೇನೆ ಎಂದು ಭರವಸೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಬೇಡಿಕೆ ಕುರಿತಾಗಿ ಮನವಿ ನೀಡಿದ ದೀವಗಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಆರ್ ಕೆ ಅಂಬಿಗ ಮಾತನಾಡಿ, ಬೇಡಿಕೆ ಈಡೇರಿಸುವ ಜವಾಬ್ದಾರಿಯನ್ನು ತೆಗೆದುಕೊಂಡ ಶಾಸಕರು ನೂರಕ್ಕೆ ನೂರು ವಿಶ್ವಾಸ ನೀಡಿದ್ದಕ್ಕಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಸಮಿತಿಯ ಸರ್ವ ಸದಸ್ಯರ ಹಾಗೂ ಗ್ರಾಮಸ್ಥರ ಇಂಗಿತದ ಪ್ರಕಾರ ಮುಂದಿನ ಹೋರಾಟವನ್ನು ಸದ್ಯಕ್ಕೆ ಕೈಬಿಟ್ಟಿರುವುದಾಗಿ ತಿಳಿಸಿದರು. ಕೂಡಲೇ ಸಂಬಂಧಪಟ್ಟ ಕಾಮಗಾರಿಯನ್ನು ಅತೀ ಶೀಘ್ರವಾಗಿ ಪ್ರಾರಂಭ ಮಾಡಿಸುವತ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕರಲ್ಲಿ ವಿನಂತಿ ಮಾಡಿಕೊಂಡರು.
ಸಭೆಯಲ್ಲಿ ದೀವಗಿ ಗ್ರಾ ಪಂ ಅಧ್ಯಕ್ಷೆ ನಾಗವೇಣಿ ಆರ್ ಅಂಬಿಗ, ಪಿಡಿಒ ರೇಖಾ ನಾಯಕ, ಸಮಿತಿಯ ಉಪಾಧ್ಯಕ್ಷ ವಿನಾಯಕ ಯು ದೇಶಭಂಡಾರಿ, ಕಾರ್ಯದರ್ಶಿ ಗಂಗಾಧರ ಎಸ್ ಅಂಬಿಗ ವೇದಿಕೆಯಲ್ಲಿದ್ದರು. ಗ್ರಾ ಪಂ ಸದಸ್ಯರಾದ ಫ್ರೇಂಕಿ ಫರ್ನಾಂಡೀಸ್, ಲೀನಾ ಫರ್ನಾಂಡೀಸ್, ಪ್ರವೀಣ ಎಮ್ ಅಂಬಿಗ, ಜಗದೀಶ ಎಸ್ ಭಟ್, ಸಮಿತಿಯ ಸದಸ್ಯರಾದ ಲಕ್ಷ್ಮಣ ಎಸ್ ಅಂಬಿಗ, ಮೈಕಲ್ ರೊಡ್ರಿಗೀಸ್, ಮಾಬ್ಲೇಶ್ವರ ಆರ್ ಅಂಬಿಗ, ರಾಘವೇಂದ್ರ ಆರ್ ದೇಶಭಂಡಾರಿ, ಸುಭಾಸ ಎನ್ ಅಂಬಿಗ, ಸಂದೀಪ ಆಯ್ ಅಂಬಿಗ, ಜಾನಪ್ಪ ದೇಶಭಂಡಾರಿ, ಅಶೋಕ ಎನ್ ದೇಶಭಂಡಾರಿ, ಗೋವಿಂದ ಟಿ ದೇಶಭಂಡಾರಿ, ಶ್ರೀಧರ ಎನ್ ಕೊಡಿಯಾ, ಯೋಗೇಶ ಎ ಅಂಬಿಗ, ಅನಿಲ ಶಿರೋಡ್ಕರ್, ವಿವೇಕ ಟಿ ನಾಯ್ಕ, ವಿನಾಯಕ ಎಮ್ ಅಂಬಿಗ, ಥಾಮಸ್ ರೊಡ್ರಿಗೀಸ್, ಮಾಬ್ಲೇಶ್ವರ ಎಸ್ ದೇಶಭಂಡಾರಿ, ಮಾಲಾ ಆರ್ ಅಂಬಿಗ, ಸವಿತಾ ಜಿ ಅಂಬಿಗ, ನಿರ್ಮಲಾ ಜಿ ದೇಶಭಂಡಾರಿ, ಸರೋಜ ಡಿ ಅಂಬಿಗ ಇನ್ನಿತರರು ಇದ್ದರು.