ನವದೆಹಲಿ: ಲೆಫ್ಟಿನೆಂಟ್ ರಿಗ್ಜಿನ್ ಚೋರೊಲ್ ಅವರು ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ನೇಮಕಗೊಂಡ ಲಡಾಖ್ ಪ್ರದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಇವರು ಕರ್ತವ್ಯದ ವೇಳೆ ಹುತಾತ್ಮರಾದ ರೈಫಲ್‌ಮ್ಯಾನ್ ರಿಗ್ಜಿನ್ ಕೆಂಡಾಲ್ ಅವರ ಪತ್ನಿ.
ಶನಿವಾರದಂದು ಚೆನ್ನೈನಲ್ಲಿರುವ ಅಧಿಕಾರಿಗಳ ತರಬೇತಿ ಅಕಾಡೆಮಿ (OTA) ಯಿಂದ ಉತ್ತೀರ್ಣರಾದ ಬಳಿಕ ಚೋರೋಲ್ ಅವರು ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಅವರೊಂದಿಗೆ ಒಟ್ಟು 35 ಮಹಿಳಾ ಕೆಡೆಟ್‌ಗಳು ತೇರ್ಗಡೆಯಾಗಿದ್ದಾರೆ.
3 ಲಡಾಖ್ ಸ್ಕೌಟ್ಸ್‌ನ ರೈಫಲ್‌ಮ್ಯಾನ್ ರಿಗ್ಜಿನ್ ಕೆಂಡಾಲ್ ಅವರು ಕರ್ತವ್ಯ ನಿರ್ವಹಣೆಯ ವೇಳೆ ಮರಣ ಹೊಂದಿದ್ದಾರೆ. ಪತಿಯನ್ನು ಕಳೆದುಕೊಂಡ ದುಃಖದಿಂದ ಹೊರಬಂದು ಚೋರೋಲ್ ಅವರು ಇಂದು ಭಾರತೀಯ ಸೇನಾಧಿಕಾರಿ ಎಲ್ಲರಿಗೂ ಮಾದರಿಯಾಗಿದ್ದಾರೆ.
11 ತಿಂಗಳ ಕಠಿಣ ತರಬೇತಿಯ ನಂತರ OTA ಚೆನ್ನೈನಲ್ಲಿ SSC W28 ಕೋರ್ಸ್‌ನ ಪಾಸಿಂಗ್ ಔಟ್ ಪರೇಡ್‌ನಲ್ಲಿ ಅವರು ಶನಿವಾರ ಭಾಗಿಯಾಗಿದ್ದಾರೆ. ಅವರ ಈ ಸಾಧನೆಯ ಕ್ಷಣವನ್ನು ಅವರ ಕುಟುಂಬದ ಸದಸ್ಯರು ಹೆಮ್ಮೆಯಿಂದ ವೀಕ್ಷಿಸಿದ್ದಾರೆ. ಅವರ ಪುಟಾಣಿ ಮಗು ಕೂಡ ಭಾಗಿಯಾಗಿದ್ದು ವಿಶೇಷವಾಗಿತ್ತು.
“ನನ್ನ ಪತಿ ಲಡಾಖ್ ಸ್ಕೌಟ್ಸ್‌ನಲ್ಲಿದ್ದರು ಮತ್ತು ಸೇನೆಯ ಅಧಿಕಾರಿಯಾಗಲು ಬಯಸಿದ್ದರು. ದುರಂತದ ನಂತರ ನಾನು ಸೈನ್ಯಕ್ಕೆ ಸೇರಲು ಬಯಸಿದ್ದೆ ಏಕೆಂದರೆ ನನ್ನ ಪತಿ ನಾನು ಸೈನ್ಯಕ್ಕೆ ಸೇರಬೇಕೆಂದು ಬಯಸಿದ್ದರು” ಎಂದು ಚೋರೊಲ್ ಹೇಳಿದ್ದಾರೆ.
ಇಂದು ಭಾರತೀಯ ಸೇನೆಯ ಅಧಿಕಾರಿಯಾಗುವ ಮೂಲಕ ಪತಿಯ ಕನಸನ್ನು ನನಸಾಗಿಸಿದ್ದೇನೆ ಎಂದಿದ್ದಾರೆ.
ಕೃಪೆ : http://news13.in