ಕಾರವಾರ: ಶಾಸಕಿ ರೂಪಾಲಿ ನಾಯ್ಕರದ್ದು ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಷ್ಟೇ ಆಗಿದೆ ಹೊರತು ಯಾವುದನ್ನೂ ಕಾರ್ಯರೂಪಕ್ಕೆ ತರುವ ಕೆಲಸವಾಗುತ್ತಿಲ್ಲ. ತಮ್ಮ ಶಾಸಕತ್ವದ ಅವಧಿಯಲ್ಲಿ ಏನನ್ನೂ ಹೇಳಿಕೊಳ್ಳುವಂಥ ಕಾರ್ಯಗಳನ್ನ ಮಾಡದೇ ಚುನಾವಣೆ ಸಮೀಪಿಸುತ್ತಿದ್ದಂತೆ ಈಗ ಭರವಸೆಗಳ ಮಹಾಪೂರ ಹರಿಸಿ ಮುಗ್ದ ಜನರನ್ನ ಮರಳು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.
ತಾಲೂಕಿನ ಮುಡಗೇರಿ ಕೈಗಾರಿಕಾ ಪ್ರದೇಶದಲ್ಲಿ ಭೂಸ್ವಾಧೀನಕ್ಕೊಳಗಾದ ಸಂತ್ರಸ್ತರಿಗೆ ಸರ್ಕಾರದಿಂದ ಮಾರುಕಟ್ಟೆ ದರ ಪರಿಹಾರ ಕೊಡಿಸುವುವುದಾಗಿ ಶಾಸಕಿ ಮುಡಗೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭರವಸೆ ನೀಡಿದ್ದಾರೆ. ಅಸಲಿಗೆ ಇದು ಹೆಚ್ಚುವರಿ ಪರಿಹಾರವಲ್ಲ. ಅದು ಇಂದಿನ ದರ, ಭೂಮಿಯ ಬೆಲೆ. ಹಾಗೆ ನೋಡುವುದಾದರೆ ಸಂತ್ರಸ್ತರಿಗೆ ಸರ್ಕಾರದ ಇಂದಿನ ದರಕ್ಕಿಂತ ಮೂರು ಪಟ್ಟು ಬೆಲೆ ನೀಡಬೇಕು. ಆದರೆ ಮಾರುಕಟ್ಟೆ ದರ ಪರಿಹಾರ ಎಂದು ಜನರನ್ನ ನಂಬಿಸಿ ಚುನಾವಣಾ ಪ್ರಚಾರ ತೆಗೆದುಕೊಳ್ಳುವ ಕಾರ್ಯ ಶಾಸಕಿ ಮಾಡುತ್ತಿದ್ದು, ಇದು ಖಂಡನೀಯ ಎಂದಿದ್ದಾರೆ.
ತಾವು ಶಾಸಕರಾಗಿ ನಾಲ್ಕೂವರೆ ವರ್ಷ ಕಳೆದರೂ ಈವರೆಗೆ ಏನೂ ಮಾಡಲಾಗಿಲ್ಲ. ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲವೂ, ಎಲ್ಲರೂ ನೆನಪಾಗಿದ್ದಾರೆ. ಇವರದ್ದು ಇದೊಂದೇ ಅಲ್ಲ, ಶಾಸಕಿಯಾದಾಗಿನಿಂದ ಹೀಗೆ ರೈಲು ಬಿಡುವ ಕಾರ್ಯಗಳು ನಡೆಯುತ್ತಲೇ ಇದೆ ಎಂದು ಅವರು ವ್ಯಂಗ್ಯ ಮಾಡಿದ್ದಾರೆ. ಈ ಹಿಂದೆ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಗೋವಾ ಬಂದಾಗ ಅಲ್ಲಿ ಅವರನ್ನು ಭೇಟಿಯಾಗಿ, ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ ಟೋಲ್ ಸಂಗ್ರಹ ಮಾಡಬಾರದು ಎಂದು ಮನವಿ ಮಾಡಿಕೊಳ್ಳುತ್ತಾರೆ. ಇವರೊಬ್ಬ ಆಡಳಿತ ಪಕ್ಷದ ಶಾಸಕಿ. ಸ್ಥಳೀಯವಾಗಿ ತಮ್ಮ ಕ್ಷೇತ್ರಗಳಲ್ಲಾಗುತ್ತಿರುವ ಸಮಸ್ಯೆಗಳನ್ನ ಬಗೆಹರಿಸಲು ಅವರಿಗೂ ಚೂರು ಅಧಿಕಾರವಿರುತ್ತದೆ. ಆದರೆ ಇವರು ಮನವಿ ಪತ್ರ ಕೊಟ್ಟು ಫೊಟೊ ತೆಗೆಸಿಕೊಂಡು ಮಾಧ್ಯಮಗಳ ಮೂಲಕ ಪ್ರಚಾರ ತೆಗೆದುಕೊಂಡು ಲಾಭ ಪಡೆಯಲು ಮಾತ್ರ ನೋಡುತ್ತಾರೆ. ರೈಲ್ವೆ, ವಿಮಾನ ನಿಲ್ದಾಣ,ಬಂದರು, ಹೀಗೆ ಅನೇಕ ಸಮಸ್ಯೆಗಳ ಕುರಿತು ಶಾಸಕಿಯವರು ಮನವಿ ಕೊಟ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ ಮನವಿಗಳನ್ನೆಲ್ಲ ಕೊಟ್ಟರೂ ಯಾವುದೊಂದು ಕಾರ್ಯರೂಪಕ್ಕೆ ಬಾರದಿರುವುದು ನೋಡಿದರೆ ಇವರ ಲೆಟರ್ ಹೆಡ್ ಗೆ ಬಹುಶಃ ಯಾರೂ ಕೂಡ ಕವಡೆ ಕಿಮ್ಮತ್ತು ಕೊಡುತ್ತಿಲ್ಲ ಅನಿಸುತ್ತಿದೆ ಎಂದಿದ್ದಾರೆ.
ರಾಜ್ಯ, ಕೇಂದ್ರದಲ್ಲೂ ಇವರದ್ದೇ ಸರ್ಕಾರವಿದೆ. ಹೀಗಿರುವಾಗ ಇವರು ಮನವಿ ಕೊಟ್ಟು ಕೊಟ್ಟು ಮಾಡುವುದಾದರೂ ಏನು? ಸೀಬರ್ಡ್ ನಿರಾಶ್ರಿತರಿಗೆ ಪರಿಹಾರ ಕೊಡಿಸಲು ಸಂಸದ ಅನಂತಕುಮಾರ ಹೆಗಡೆಯವರ ನಿಯೋಗ ಕರೆದುಕೊಂಡು ಹೋಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒಪ್ಪಿಸಿ ನಾನೇ ಪರಿಹಾರ ಬಿಡುಗಡೆ ಮಾಡಿಸಿದ್ದು ಎಂದು ಶಾಸಕಿ ಬಡಾಯಿ ಕೊಚ್ಚಿ ಕೊಂಡರು. ಹಾಗಿದ್ದರೆ ಹಾಲಕ್ಕಿ ಗೌಡರನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಚಾರ ಏನಾಯಿತು? ಸೀಬರ್ಡ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಪರಿಹಾರ ನೀಡಿದ್ದೆ ಹೊರತು ಶಾಸಕಿಯ ದೆಹಲಿ ಭೇಟಿಯಿಂದಲ್ಲ ಎಂದಿದ್ದಾರೆ.
ಇವೆಲ್ಲವೂ ಚುನಾವಣಾ ಗಿಮಿಕ್. ಚುನಾವಣೆ ಬರುತ್ತಿದ್ದಂತೆ ಇವೆಲ್ಲವೂ ನೆನಪಾಗುತ್ತದೆ. ಸ್ಥಳೀಯರ ಬಗ್ಗೆ ಇವರಿಗೆ ಕಿಂಚಿತ್ತೂ ಕಳಕಳಿ ಇಲ್ಲ. ಸ್ಥಳೀಯ ಯುವಕರಿಗೆ ಸ್ಥಳೀಯವಾಗಿಯೇ ಉದ್ಯೋಗ ಕೊಡಿಸಬೇಕೆಂಬ ಆಸಕ್ತಿ ಇಲ್ಲ. ಸ್ಥಳೀಯ ಗುತ್ತಿಗೆದಾರರಿಗೂ ಅನ್ಯಾಯ ಮಾಡಿದ್ದಾರೆ, ತಾವು ಆರಿಸಿ ಬಂದ ಬಳಿಕ ಉದ್ಯೋಗ ಮೇಳ ಮಾಡಿದ್ದ ಶಾಸಕಿ, ಎಷ್ಟು ಜನರಿಗೆ ಉದ್ಯೋಗ ಕೊಡಿಸಿದರು? ಕ್ಷೇತ್ರದಲ್ಲಿ ಎಲ್ಲಿ ಉದ್ಯೋಗ ಸೃಷ್ಟಿ ಮಾಡಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಶಾಸಕಿಯಿಂದ ಭರವಸೆಗಳ ಮಹಾಪೂರವಷ್ಟೇ,ಯಾವುದೂ ಕಾರ್ಯರೂಪಕ್ಕೆ ಬರುತ್ತಿಲ್ಲ: ಸತೀಶ್ ಸೈಲ್
