ಅಂಕೋಲಾ: ಮಂಜಗುಣಿ- ಗಂಗಾವಳಿ ನಡುವಿನ ಸೇತುವೆ ಕಾಮಗಾರಿಗೆ ಹಾಕಲಾಗಿದ್ದ ಮಣ್ಣನ್ನು ತೆರವುಗೊಳಿಸುವಂತೆ ಸಂಬಂಧಿಸಿದ ಇಲಾಖೆ ಮತ್ತು ಗುತ್ತಿಗೆದಾರರಿಗೆ ತಿಳಿಸಬೇಕು. ಇಲ್ಲದಿದ್ದರೆ ಇದರಿಂದ ಉಂಟಾಗುವ ಅನಾಹುತದಿಂದ ಜನರು ಸಮಸ್ಯೆಗೆ ಒಳಗಾಗಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ತಹಸೀಲ್ದಾರ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ ನಾಗರಾಜ ಮಂಜಗುಣಿ ಅವರು ಅಲ್ಲಿಯ ಪರಿಸ್ಥಿತಿಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಅವರು ಈ ಕುರಿತು ಅಧಿಕಾರಿಗಳಿಗೆ ಸೂಚಿಸಿದರು.
ನಾಗರಾಜ ಮಂಜಗುಣಿ ಮಾತನಾಡಿ, ಸೇತುವೆ ನಿರ್ಮಾಣಕ್ಕಾಗಿ ಗಂಗಾವಳಿ ನದಿಗೆ ಮಣ್ಣು ಹಾಕಿದ್ದರ ಪರಿಣಾಮ ನದಿಗೆ ನಿರಂತರ ಮೂರು ಬಾರಿ ನೆರೆ ಉಂಟಾಗಿ ನೂರಾರು ಮನೆಗಳು ಸಂಪೂರ್ಣ ನಾಶ, ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪಾಸ್ತಿ ದಾಖಲೆ ಪತ್ರಗಳು ನೀರು ಪಾಲಾಗಿವೆ. ಹೀಗಾಗಿ ಕಳೆದ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ತಹಸೀಲ್ದಾರ ಉದಯ ಕುಂಬಾರ, ಸಿಪಿಐ ಸಂತೋಷ ಶೆಟ್ಟಿ ಸ್ಥಳಕ್ಕೆ ಆಗಮಿಸಿ ಮಣ್ಣು ತೆರವುಗೊಳಿಸಲು ಸೂಚಿಸಿದ್ದರು. ಆದರೆ ಕಂಪನಿಯವರು ನೀರಿನ ಮೇಲ್ಭಾಗದ ಮಣ್ಣನ್ನು ಮಾತ್ರ ತೆರವುಗೊಳಿಸಿದ್ದರು. ಇನ್ನು ನೀರಿನಾಳದ ಮಣ್ಣನ್ನು ತೆರವುಗೊಳಿಸಿಲ್ಲ ಎಂದರು.
ಉಪವಿಭಾಗಾಧಿಕಾರಿ ರಾಘವೇಂದ್ರ ಜಗಳಾಸರ ಮಾತನಾಡಿ, ಕೆ.ಆರ್.ಡಿ.ಸಿ.ಎಲ್. ಅಧಿಕಾರಿಗಳೊಂದಿಗೆ ಮಾತನಾಡಿ, ತಕ್ಷಣ ಮಣ್ಣು ತೆರವುಗೊಳಿಸುವಂತೆ ಸೂಚಿಸಲಾಗುವುದು. ಮುಂದೆ ಇಂತಹ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ತಹಸೀಲ್ದಾರ ಉದಯ ಕುಂಬಾರ ಇದ್ದರು.
ಕೋಟ್…
ಸೇತುವೆ ನಿರ್ಮಾಣದ ಭೂಮಿ ಪೂಜೆ ಮಾಡುವಾಗ ಗುತ್ತಿಗೆ ಪಡೆದ ಕಂಪನಿಯವರು ಕೇವಲ 6 ತಿಂಗಳಲ್ಲಿ ಸೇತುವೆ ಮುಗಿಸುತ್ತೇವೆ ಎಂದಿದ್ದರು. ಆದರೆ ಈಗ 4 ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಹಾಗೇ ನದಿಗೆ ಮಣ್ಣು ಹಾಕಿದ್ದರಿಂದ ಕೃತಕ ನೆರೆಗೆ ಕಾರಣವಾಗಿದೆ. ನೀರಿನಾಳದ ಸಂಪೂರ್ಣ ಮಣ್ಣನ್ನು ಬಾರ್ಜ್ ಮೂಲಕ ತೆಗೆದು ತಕ್ಷಣ ಸೇತುವೆ ಕಾಮಗಾರಿ ಪೂರ್ತಿಗೊಳಿಸಿ ರಸ್ತೆ ನಿರ್ಮಿಸಿ ಆದಷ್ಟು ಶೀಘ್ರ ರಸ್ತೆ ಸಂಪರ್ಕ ಕಲ್ಪಿಸಬೇಕು.– ನಾಗರಾಜ ಮಂಗುಣಿ, ಸ್ಥಳೀಯ