ಕಾರವಾರ: ಕದ್ರಾ ಜಾತ್ರೆಗೆ ಬಂದ ನೂರಾರು ಜನರು ಬಸ್ ಇಲ್ಲದೇ ಪರದಾಡಿದ ಘಟನೆ ಸಂಭವಿಸಿದೆ.
ಕದ್ರಾ ಜಾತ್ರೆಗೆ ಕಾರವಾರ ಹಾಗೂ ಸುತ್ತ ಮುತ್ತಲ ಪ್ರದೇಶದಿಂದ ಸಾವಿರಾರು ಜನರು ಆಗಮಿಸಿದ್ದರಾದರೂ, ಸಂಜೆ ನಂತರದಲ್ಲಿ ಇವರಿಗೆ ಪ್ರಯಾಣಕ್ಕೆ ಬಸ್ ಇಲ್ಲದೇ ಪರದಾಡುವಂತಾಯಿತು.ಸುಮಾರು ಎರಡು ಗಂಟೆಗಳಿಗೂ ಅಧಿಕ ಕಾಲ ರಸ್ತೆ ಪಕ್ಕ ಕಾದು ಕುಳಿತ ಜನರು ನಂತರ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರನ್ನು ಸಂಪರ್ಕಿಸಿ ಅವರ ನೆರವಿನಿಂದ ಬಸ್ ಸೌಲಭ್ಯ ಪಡೆದುಕೊಂಡು ಮನೆಗೆ ಸುರಕ್ಷಿತವಾಗಿ ತಲುಪಿದ್ದಾರೆ.
ಕದ್ರಾ ಜಾತ್ರೆಗೆ ಬಂದವರಿಗೆ ಬಸ್ ಸಿಗದೇ ಪರದಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಮಾಧವ ನಾಯಕ ಅವರು ಕದ್ರಾ ಠಾಣೆಯ ಇನ್‌ಸ್ಪೆಕ್ಟರ್ ದಾಸರೆ ಹಾಗೂ ತಹಸೀಲ್ದಾರ ಎನ್.ಎಫ್. ನರೋನಾ ಅವರಿಗೆ ಕರೆ ಮಾಡಿ ಕದ್ರಾ ಜಾತ್ರೆಗೆ ತೆರಳಿದವರು ಬಸ್ ಇಲ್ಲದೇ ಪರದಾಡುತ್ತಿರುವ ಬಗ್ಗೆ ಗಮನಕ್ಕೆ ತಂದಿದ್ದಾರೆ. ಈ ಕರೆಗೆ ಸ್ಪಂದಿಸಿದ ಕದ್ರಾ ಠಾಣೆಯ ಇನ್‌ಸ್ಪೆಕ್ಟರ್ ದಾಸರೆ ಹಾಗೂ ತಹಸೀಲ್ದಾರ ಎನ್. ಎಫ್. ನರೋನಾ ಅವರು ಕೂಡಲೇ ಬಸ್ ಡಿಪೋ ಮ್ಯಾನೇಜರ್ ಅವರೊಂದಿಗೆ ಮಾತನಾಡಿ, ಬಸ್ ವ್ಯವಸ್ಥೆ ಕಲ್ಪಿಸಿ ಜನರಿಗೆ ನೆರವಾಗಿದ್ದಾರೆ.