ಹಳಿಯಾಳ: ರೈತ ಬೀದಿಯಲ್ಲಿ ಪ್ರತಿಭಟನೆ ಮಾಡುವಂತಹ ಪರಿಸ್ಥಿತಿ ತಂದಿಟ್ಟ ಕೇಂದ್ರ ಹಾಗೂ ರಾಜ್ಯ ಸರಕಾರ ಕೂಡಲೇ ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ಶ್ರೀರಾಮ ಸೇನೆ ಸಂಘಟನೆ ಹಾಗೂ ಇನ್ನಿತರ ಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಶ್ರೀರಾಮ ಸೇನೆ ಸಂಘಟನೆಯ ಪ್ರಮೋದ್ ಮುತಾಲಿಕ್ ಹೇಳಿದರು.
ಹಳಿಯಾಳ ತಾಲೂಕಿನ ಕಬ್ಬುಬೆಳೆಗಾರರು ಕೈಗೊಂಡಿರುವ ಪ್ರತಿಭಟನೆ ಹಾಗೂ ರೈತರ ಹೋರಾಟವನ್ನು ಬೆಂಬಲಿಸಿ ಧಾರವಾಡದ ಪರಮಾತ್ಮಜಿ ಮಹಾರಾಜ ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸರಕಾರ ಕೇವಲ ಅಧಿಕಾರ ಹಾಗೂ ಹಣದ ಹಿಂದೆ ಬಿದ್ದಿದೆ. ಕ್ಷೇತ್ರದ ರೈತ ಮುಖಂಡರು ಸಮಸ್ಯೆಯನ್ನು ಪರಿಹರಿಸುವಂತೆ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಸಹ ಸ್ಪಂದಿಸದ ಮುಖ್ಯಮಂತ್ರಿ ಹಾಗೂ ಸಚಿವರು ನಿದ್ರಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ಕಾಳಿ ಬ್ರಿಗೇಡ್ ಸಂಘಟನೆ ರವಿ ರೇಡ್ಕರ, ವಕೀಲ ರಾಮಲಿಂಗ ಜಾದವ, ದಾಂಡೇಲಿಯ ದಿನೇಶ ಹಳದುಕರ, ಫಿರೋಜ್ ಫಿರಜಾದೆ ಹಾಗೂ ಕಬ್ಬು ಬೆಳೆಗಾರರ ಸಂಘಟನೆಯ ಜಿಲ್ಲಾಧ್ಯಕ್ಷ ಕುಮಾರ ಬೊಬಾಟೆ ಪ್ರಾಸ್ತಾವಿಕವಾಗಿ ಮಾತನಾಡಿ ಕೂಡಲೇ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್ ಎಲ್ ಘೋಟೆಕರ, ಹಿರಿಯ ಮುಖಂಡ ಉಡಚಪ್ಪ ಬೊಬಾಟೆ, ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಂ.ವಿ ಘಾಡಿ, ತಾಲೂಕಾ ಅಧ್ಯಕ್ಷ ಶಂಕರ ಕಾಜಗಾರ, ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ, ಪುಂಡಲಿಕ ಗೊಡಿಮನಿ, ರಾಮದಾಸ ಬೆಳಗಾವಂಕರ, ಸಂಜು ಬಳಿರಾಮ ಮೋರೆ, ಬಸವರಾಜ ಬೆಂಡಿಗೇರಿಮಠ ಹಾಗೂ ನೂರಾರು ಸಂಖ್ಯೆಯ ರೈತರು ಉಪಸ್ಥಿತರಿದ್ದರು.