ಮುಂಡಗೋಡ: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ 30 ದಿನಗಳ ಕಾಲ ವಿಶೇಷವಾಗಿ ಜಿಲ್ಲೆ ಮತ್ತು ಯಲ್ಲಾಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷದ ವಿಚಾರ ಮಂಡನೆ ಮಾಡುತ್ತೇವೆ. ನವೆಂಬರ್ 1 ರಂದು ಬನವಾಸಿಯಲ್ಲಿ ಬೃಹತ್ ಬೈಕ್ ಮೆರವಣಿಗೆ ಮಾಡಿ ಮನೆಮನೆಗೆ ಕನ್ನಡ ಧ್ವಜ ನೀಡುವ ನಿರ್ಧಾರವನ್ನು ಮಾಡಿದ್ದೇವೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ನಾಯ್ಕ ಕಾಗಾಲ ಹೇಳಿದರು.
ಮುಂಡಗೋಡ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 5 ಸಾವಿರ ಕನ್ನಡದ ಧ್ವಜ ಮನೆ ಮನೆಗೆ ಹಂಚುವ ಜತೆಗೆ ಮನೆ ಮನೆಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಕುಮಾರಸ್ವಾಮಿ ಎರಡು ಬಾರಿ ಅಲ್ಪ ಅಧಿಕಾರದ ಅವಧಿಯಲ್ಲಿ ಗ್ರಾಮ ವಾಸ್ತವ್ಯ, ರೈತರ ಸಾಲ ಮನ್ನಾ, ಹೀಗೆ ಹಲವಾರು ಸಾಧನೆಯನ್ನು ಹೇಳಿ ಮುಂದಿನ ಬಾರಿ ಜನರ ಪರ ಕಾರ್ಯಕ್ರಮ ಮಾಡಲು ಸ್ವತಂತ್ರವಾಗಿ 5 ವರ್ಷಗಳ ಕಾಲ ಆಡಳಿತ ಅವಕಾಶ ನೀಡಿ, ಈ ಬಾರಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಲು ಜನರೇ ಉತ್ಸಾಹ ತೋರುತ್ತಿದ್ದಾರೆ. ಕರ್ನಾಟಕದಲ್ಲಿಯೂ ಈ ಬಾರಿ ಪೂರ್ಣಾವಧಿ ಅಧಿಕಾರಕ್ಕೆ ಅವಕಾಶ ನೀಡುತ್ತಾರೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಾಫ ಮಿರ್ಜಾನಕರ ಕ್ಷೇತ್ರದ ಉಸ್ತುವಾರಿ ಮುತ್ತುರಾಜ್ ಸಂಗೂರಮಠ, ಮುಖಂಡರಾದ ಬಿನತ್ ಸಿದ್ದಿ, ಸೋಮೇಶ್ವರ ಗೌಡ, ಮಾದೇವ ಇಳಗೇರ ಉಪಸ್ಥಿತರಿದ್ದರು.