ಸಿದ್ದಾಪುರ: ಯಕ್ಷಗಾನ ಸೇರಿದಂತೆ ವಿವಿಧ ಕಲಾ ಸಂಘಟನೆಗಳ ಮೇಲೆ ಕಲೆ ಹಾಗೂ ಕಲಾವಿದರನ್ನು ಬೆಳೆಸುವುದರ ಜತೆಗೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ಇದೆ ಎಂದು ಖ್ಯಾತ ಹಿರಿಯ ಯಕ್ಷಗಾನ ಕಲಾವಿದ ಭಾಸ್ಕರ ಜೋಶಿ ಶಿರಳಗಿ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಹೊಸಗದ್ದೆಯ ಸರಸ್ವತಿ ನಿಲಯದಲ್ಲಿ ‘ಸರಸ್ವತಿ ಕಲಾ ಟ್ರಸ್ಟ್ (ರಿ) ಹೊಸಗದ್ದೆ ಇದನ್ನು ಲೋಕಾರ್ಪಣೆ ಮಾಡಿ ನಂತರ ಡಾ.ಜಿ.ಎಂ.ಹೆಗಡೆ ಬೊಮ್ನಳ್ಳಿ( ಹಾರ್ಸಿಕಟ್ಟಾ) ಅವರಿಗೆ ಗೌರವ ಸಮರ್ಪಣೆ ಮಾಡಿ ಅವರು ಮಾತನಾಡಿದರು.
ವೇದಿಕೆ ಇದ್ದರೆ ಕಲಾವಿದರು ಬೆಳೆಯುತ್ತಾರೆ. ವೇದಿಕೆ ಸಿದ್ದಗೊಳ್ಳುವುದಕ್ಕೆ ಕಲಾ ಸಂಘಟನೆಗಳಿಗೆ ಸಮಾಜದ ಪ್ರೋತ್ಸಾಹ ಅತ್ಯವಶ್ಯ ಎಂದು ಹೇಳಿದರು.
ಗೌರವ ಸಮರ್ಪಣೆ ಸ್ವೀಕರಿಸಿ ಮಾತನಾಡಿದ ಡಾ.ಜಿ.ಎಂ.ಹೆಗಡೆ ಬೊಮ್ನಳ್ಳಿ ( ಹಾರ್ಸಿಕಟ್ಟಾ) ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಯಾದ ನನಗೆ ಗೌರವ ನೀಡಿರುವುದು ಸಂತಸ ತಂದಿದೆ ಎಂದು ಹೇಳಿದರು. ಪ್ರಗತಿಪರ ಕೃಷಿಕ ಶ್ರೀಧರ ಹೆಗಡೆ ವಾಟೆಹಕ್ಲ ಅಧ್ಯಕ್ಷತೆ ವಹಿಸಿದ್ದರು.
ಹಾರ್ಸಿಕಟ್ಟಾ ಗ್ರಾಪಂ ಸದಸ್ಯ ಅನಂತ ಹೆಗಡೆ ಹೊಸಗದ್ದೆ, ಹಾರ್ಸಿಕಟ್ಟಾ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ದಿನೇಶ ಹೆಗಡೆ ಚಳ್ಳೆಹದ್ದ, ಬಿದ್ರಕಾನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕ ಎಂ.ಆರ್.ಭಟ್ಟ, ದರ್ಶನ ಹೆಗಡೆ ವಾಟೆಹಕ್ಲ ಮಾತನಾಡಿದರು. ಟ್ರಸ್ಟಿನ ಅಧ್ಯಕ್ಷ ಪ್ರಸನ್ನ ಹೆಗಡೆ ಹೊಸಗದ್ದೆ ಟ್ರಸ್ಟಿನ ಉದ್ದೇಶದ ಕುರಿತು, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ ಅಭಿನಂದನಾ ಮಾತನಾಡಿದರು.
ಶ್ರೀಧರ ಭಟ್ಟ ಮಾಣಿಕ್ನಮನೆ ಹಾಗೂ ಮಹೇಶ ಭಟ್ಟ ಅಗ್ಗೇರೆ ವೇದಘೋಷ ಮಾಡಿದರು. ರೂಪಾ ಹೆಗಡೆ, ಭೂಮಿಕಾ ಹೆಗಡೆ ಪ್ರಾರ್ಥನೆ ಹಾಡಿದರು.ಪಿ.ವಿ.ಹೆಗಡೆ ಹೊಸಗದ್ದೆ ಸ್ವಾಗತಿಸಿದರು, ಪ್ರಥ್ವಿ ಜಿ.ನಾಯ್ಕ ವಂದಿಸಿದರು. ಅಭಯ ಹೆಗಡೆ ನಿರ್ವಹಿಸಿದರು.
ನಂತರ ನಡೆದ ಜಾಂಬವತಿ ಪರಿಣಯ ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳದಲ್ಲಿ ಮಾಧವ ಭಟ್ಟ ಕೊಳಗಿ, ಶ್ರೀಕಾಂತ ಹೆಗಡೆ ಹಣಜೀಬೈಲ್ , ಗಣಪತಿ ಹೆಗಡೆ ಮುಚ್ಚಗುಳಿ, ಅಭಯ ಹೆಗಡೆ,ಭೂಮಿಕಾ ಹೆಗಡೆ ಸಹಕರಿಸಿದರು. ಅರ್ಥಧಾರಿಗಳಾಗಿ ಮಂಜುನಾಥ ಗೊರಮನೆ, ಗಣಪತಿ ಹೆಗಡೆ ಗುಂಜಗೋಡ, ಪಿ.ವಿ.ಹೆಗಡೆ ಹೊಸಗದ್ದೆ, ನಾಗರಾಜ ಮತ್ತಿಗಾರ ವಿವಿಧ ಪಾತ್ರನಿರ್ವಹಿಸಿ ಮೆಚ್ಚುಗೆಗಳಿಸಿದರು.