ಶಿರಸಿ: ತಾಯಂದಿರು ಯಕ್ಷಗಾನಕ್ಕೆ ತಮ್ಮ ಮಕ್ಕಳನ್ನು ಕೊಡಬೇಕು. ಆ ಮೂಲಕ ಯಕ್ಷಗಾನ ಬೆಳೆಸಬೇಕಿದೆ ಎಂದು ಯಕ್ಷಗಾನ ಸಂಶೋಧಕ, ವಾಗ್ಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಕುಮಟಾ ಪ್ರತಿಪಾದಿಸಿದರು.
ಶನಿವಾರ ತಾಲೂಕಿನ ಬಾಳಗಾರಿನ ಜೋಗಿಮನೆಯಲ್ಲಿ ಜೋಗಿಮನೆ ಬಳಗವು ಕಾನಸೂರಿನ ಸೇವಾರತ್ನ ಮಾಹಿತಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಯಕ್ಷ ಪಂಚಕ ಸಮಾರೋಪ ಹಾಗೂ ಶ್ರೀ ಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಲೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮರಾಠಿ ರಂಗಭೂಮಿ ಉದಯಕ್ಕೆ ಯಕ್ಷಗಾನ ಕಾರಣವಾಗಿದೆ. ನಮ್ಮ ಜನ ಅದು ನಮ್ಮದೆಂದು ಹೇಳಲು ಹಿಂಜರಿಯುತ್ತಾರೆ. ಯಕ್ಷಗಾನದಲ್ಲಿ ಸಬ್ ಕೆ ಸಾಥ್ ಆಗಿ ಕೆಲಸ ಮಾಡಿದ್ದೇವೆ ಎಂದರು.
ಭಾಗವತರು ಯಕ್ಷಗಾನದ ದುರಸ್ಥಿ ಮಾಡಬೇಕು. ಅವರು ಯಕ್ಷಗಾನ ಅಪಸವ್ಯ ನಿಲ್ಲಿಸಬೇಕು. ಸಮಷ್ಟಿಯಾಗಿ ಯಕ್ಷಗಾನ ಭವ್ಯ, ದಿವ್ಯ ಕಲೆ. ಯಕ್ಷಗಾನ ನಮ್ಮ ಅಸ್ಮಿತೆ ಎಂದ ಜಿ.ಎಲ್.ಹೆಗಡೆ, ಇಡೀ ಉತ್ತರ ಕನ್ನಡ ಯಕ್ಷಗಾನದ ಹುಟ್ಟೂರು. ಬಂಗಾರ, ತೋಟ ಮನೆ ಮಾರಾಟ ಮಾಡಿ ಯಕ್ಷಗಾನ ಮೇಳ ಮಾಡಿದ್ದಾರೆ. ಆದರೆ ನಾವು ಯಾರಿಗೂ ಹೇಳಿಲ್ಲ ಎಂದರು.
ಜೋಗಿಮನೆ ಮೇಳದ ಪುನರುತ್ಥಾನ, ಯಕ್ಷಗಾನ ಪುನರುತ್ಥಾನದ ಕಾರ್ಯ ಇಲ್ಲಾಗುತ್ತಿದೆ. ಉತ್ತರ ಕನ್ನಡಿಗರು ಯಕ್ಷಗಾನ ಏಳ್ಗೆಗೆ ಶಕ್ತಿ ಮೀರಿ ಕೆಲಸ ಮಾಡಿದ್ದೇವೆ ಎಂದರು.
ಅಕಾಡೆಮಿ ಮೂಲಕ ಯಕ್ಷಗಾನ ಕೊಡುಗೆ ಯಕ್ಷಗಾನ ಸಾಹಿತ್ಯ ಸಮ್ಮೇಳನ ಆಗಲು 2 ಕೋಟಿ.ರೂ. ಬಿಡುಗಡೆ ಮಾಡಿಸಲಾಗಿದೆ. ಯಕ್ಷಗಾನ ವಿಶ್ವಕೋಶ ರಚನೆ ಕೆಲಸ ಮಾಡಲಾಗುತ್ತಿದೆ ಎಂದರು.
ರಾಜ್ಯ ಇತಿಹಾಸ ಪಠ್ಯಕ್ರಮ ಸಮಿತಿಯ ಸದಸ್ಯ, ಭಾರತೀಯ ಇತಿಹಾಸ ಸಂಕಲನ ಸಮಿತಿಯ ರಾಜ್ಯ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷ ಡಾ.ಬಾಲಕೃಷ್ಣ ಹೆಗಡೆ, ವಾಸ್ತವ ಇತಿಹಾಸ ತಿಳಿಸುವ ಕಾರ್ಯ ಮಾಡಬೇಕಿದೆ. ಇತಿಹಾಸ ತಿರುಚಬಾರದು ಎಂದರು.
ಭಾರತ ಸರ್ಕಾರದ ಕಂಪನಿ ಸೆಕ್ರೆಟರಿ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಎಸ್.ನಾಗೇಂದ್ರ ಡಿ.ರಾವ್, ಯಕ್ಷಗಾನ ಅತ್ಯಂತ ಮಹತ್ವದ ಕಲೆ ಎಂದರು.
ಸೇವಾರತ್ನ ಮಾಹಿತಿ ಕೇಂದ್ರದ ಅಧ್ಯಕ್ಷ ರತ್ನಾಕರ ಭಟ್ ಮುಂದಿನ ವರ್ಷ ಕೂಡ ಇಂಥ ಕಾರ್ಯಕ್ರಮ ನಡೆಸಲು ಸಹಕಾರ ಬೇಕು. ಯಕ್ಷ ದಶಕ ಕಾರ್ಯಕ್ರಮ ನಡೆಸಲು ಚಿಂತಿಸಿದ್ದೇವೆ ಎಂದರು. ಜೋಗಿಮನೆ ಬಳಗದ ಅಧ್ಯಕ್ಷ ಅನಂತ ರಾಮಕೃಷ್ಣ ಹೆಗಡೆ ಜೋಗಿಮನೆ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಅತ್ಯಂತ ಕಿರಿ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಕು.ತುಳಸಿ ಹೆಗಡೆ, ಮತ್ತು ಎನ್.ಎಸ್.ಎಸ್.ನಲ್ಲಿ ಇತ್ತೀಚೆಗೆ ರಾಷ್ಟ್ರೀಯ ಯುವ ಯೋಧ ಪ್ರಶಸ್ತಿ ಪಡೆದ ವಿದ್ಯಾರ್ಥಿನಿ ಕು.ನಾಗವೇಣಿ ಎನ್. ಅವರನ್ನು ಸನ್ಮಾನಿಸಲಾಯಿತು.
85ರ ಹಿರಿಯಾಕೆ ಸರಸ್ವತಿ ಭಟ್ಟ ಪ್ರಾರ್ಥಿಸಿದರು. ಮೈತ್ರೇಯ ಹೆಗಡೆ ಸ್ವಾಗತಿಸಿದರು. ಲಕ್ಷ್ಮೀ ಹೆಗಡೆ ನಿರ್ವಹಿಸಿದರು. ಕಾತ್ಯಾಯಿನಿ ಹೆಗಡೆ ವಂದಿಸಿದರು.
ಬಳಿಕ ನಡೆದ ತಾಳಮದ್ದಲೆಯಲ್ಲಿ ಭಾಗವತರಾಗಿ ಶ್ರೀನಿವಾಸ ಭಾಗವತ ಮತ್ತಿಘಟ್ಟ, ಎಂ.ಪಿ.ಹೆಗಡೆ, ಉಳ್ಳಾಲಗದ್ದೆ, ಮೃದಂಗದಲ್ಲಿ ಶ್ರೀಪತಿ ಹೆಗಡೆ ಕಂಚಿಮನೆ, ಚಂಡೆಯಲ್ಲಿ ಗಂಗಾಧರ ಹೆಗಡೆ ಕಂಚಿಮನೆ ಸಹಕಾರ ನೀಡಿದರು. ಅರ್ಥಧಾರಿಗಳಾಗಿ ಡಾ.ಜಿ.ಎಲ್.ಹೆಗಡೆ, ಕುಮಟಾ, ಆರ್.ಟಿ.ಭಟ್ ಕಬಗಾಲ್, ಸುಬ್ರಾಯ ಹೆಗಡೆ ಕೆರೆಕೊಪ್ಪ, ರತ್ನಾಕರ ಭಟ್ ಕಾನಸೂರು, ವಿ.ರಾಮಚಂದ್ರ ಭಟ್ ಶಿರಳಗಿ, ಭವಾನಿ ಭಟ್ ಶಿರಸಿ, ರೋಹಿಣಿ ಹೆಗಡೆ ಅಮಚಿಮನೆ ಮತ್ತು ಆನಂದ ಶೀಗೇಹಳ್ಳಿ ಭಾಗವಹಿಸಿದರು.
ಯಕ್ಷಗಾನಕ್ಕೆ ಸಂಪನ್ಮೂಲ ಕೇಂದ್ರ ಉತ್ತರ ಕನ್ನಡ.– ಡಾ. ಜಿ.ಎಲ್.ಹೆಗಡೆ, ನಿಕಟಪೂರ್ವ ಅಧ್ಯಕ್ಷರು ಯಕ್ಷಗಾನ ಅಕಾಡೆಮಿ
ಯಾರೂ ಪಠ್ಯದ ಇತಿಹಾಸ ಕೂಡ ತಿರುಚುವ ಕಾರ್ಯ ಮಾಡಬಾರದು.-ಡಾ. ಬಾಲಕೃಷ್ಣ ಹೆಗಡೆ, ಸದಸ್ಯರು, ರಾಜ್ಯ ಇತಿಹಾಸ ಪಠ್ಯಕ್ರಮ ಸಮಿತಿ