ಶಿರಸಿ : ಶಿರಸಿ ಇನ್ನರ್‌ವೀಲ್ ಕ್ಲಬ್ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳಿಂದ ನಗರದಲ್ಲಿ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಕುರಿತ ಜಾಗೃತಿ ಜಾಥಾ ನಡೆಯಿತು.
ಇತ್ತೀಚಿನ ದಿನಗಳಲ್ಲಿ ಮಧ್ಯ ವಯಸ್ಸಿನ ಯುವತಿಯರಲ್ಲಿ ಸೇರಿದಂತೆ ಕ್ಯಾನ್ಸರ್ ಹೆಚ್ಚಿತ್ತಿರುವ ಹಿನ್ನಲೆಯಲ್ಲಿ ಅದಕ್ಕೆ ಪೂರಕವಾದ ಮೆಮೋಗ್ರಾಮ್ ಮಿಷನ್ ಕುರಿತು ಜಾಥಾ ವೇಳೆಯಲ್ಲಿ ತಿಳಿಸಲಾಯಿತು.
ಜಾಥಾಕ್ಕೆ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ಭಟ್ ಬೆಳಖಂಡ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಇತ್ತೀಚಿಗೆ ಕ್ಯಾನ್ಸರ್ ಹೆಚ್ಚುತ್ತಿದೆ. ಯಾವ ಕಾರಣದಿಂದ ಬರುತ್ತಿದೆ ಎಂಬುದೂ ಸಹ ತಿಳಿಯುತ್ತಿಲ್ಲ. ಶಿರಸಿ ಸಮೀಪದ ಗ್ರಾಮವೊಂದರ ಸುತ್ತಮುತ್ತಲೂ 20 ಕ್ಕೂ ಅಧಿಕ ಮಂದಿಗೆ ಕ್ಯಾನ್ಸರ್ ಪತ್ತೆಯಾಗಿ, ಆತಂಕ ಸೃಷ್ಟಿಸಿದೆ.ಅಲ್ಲದೇ ಮಹಿಳೆಯರೂ ಸಹ ಇಂದು ಜಾಗೃತರಾಗಬೇಕಿದೆ. ಕಾರಣ ಇಂತಹ ಜಾಗೃತಿ ಜಾಥಾ ಮತ್ತಷ್ಟು ನಡೆಯಬೇಕಿದೆ ಎಂದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಗಣೇಶ ಹೆಗಡೆ ಜಾಥಾಕ್ಕೆ ಶುಭಕೋರಿದರು. ಪ್ರಮುಖರಾದ ಡಾ.ಕೆ.ವಿ.ಶಿವರಾಮ, ಮಾಧುರಿ ಶಿವರಾಮ, ಕೆ.ಎನ್.ಹೊಸ್ಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಾಥಾ ರೋಟರಿ ಸೆಂಟರ್ ನಿಂದ ಹೊರಟು ಅಶ್ವಿನಿ ವೃತ್ತ, ಹೊಸಪೇಟೆ ರಸ್ತೆ, ಸಿಪಿ ಬಝಾರ್, ದೇವಿಕೆರೆ ಮೂಲಕ ಪುಮಃ ರೋಟರಿ ಸೆಂಟರ್ ಬಳಿ ಬಂದು ಮುಕ್ತಾಯಗೊಂಡಿತು. ಮಹಿಳಾ ಸಂಘಟನೆಗಳ ಪ್ರಮುಖರು, ನರ್ಸಗಳು ಸೇರಿ ನೂರಾರು ಜನರು ಭಾಗವಹಿಸಿದ್ದರು.