ಮುಂಡಗೋಡ: ಪೊಲೀಸ್ ಜೀಪ್‌ಗೆ ಹಾಕಿಸಿಕೊಂಡ ಡೀಸೆಲ್ ಹಣ ಕೇಳಿದ್ದಕ್ಕೆ ಪೆಟ್ರೋಲ್ ಬಂಕ್ ಸಿಬ್ಬಂದಿಯೊಬ್ಬನನ್ನ ಠಾಣೆಗೆ ಕರೆತಂದು ಪೊಲೀಸರು ಚಿತ್ರಹಿಂಸೆ ನೀಡಿರುವ ಆರೋಪ ಕೇಳಿಬಂದಿದೆ.
ಸೋಮವಾರ ನಗರದದ ಬೆಂಡಿಗೇರಿ ಪೆಟ್ರೋಲ್ ಬಂಕ್‌ಗೆ ಡೀಸೆಲ್ ಹಾಕಿಸಲು ಬಂದಿದ್ದ ಪೊಲೀಸ್ ಸಿಬ್ಬಂದಿಯೋರ್ವರು 30 ಲೀಟರ್ ಡೀಸೆಲ್ ಹಾಕಿಸಿಕೊಂಡಿದ್ದಾರೆ. ಈ ವೇಳೆ ಡೀಸೆಲ್ ಹಾಕಿಸಿದ ಸಿಬ್ಬಂದಿ ಹಣ ಕೇಳಿದ್ದು, ಕಾರ್ಡ್ ಸ್ವೈಪ್ ಮಾಡಿದ್ದಾರೆನ್ನಲಾಗಿದೆ. ಆದರೆ ತಾಂತ್ರಿಕ ಕಾರಣದಿಂದ ಕಾರ್ಡ್ ಸ್ವೈಪ್ ಆಗದ್ದಕ್ಕೆ ಪೊಲೀಸ್ ಸಿಬ್ಬಂದಿ ಸಂಜೆ ಕೊಡುವುದಾಗಿ ಹೇಳಿ ಹೋಗಿದ್ದಾರೆ.
ಸಂಜೆಯಾದರೂ ಹಣ ನೀಡದಕ್ಕಾಗಿ ಪೊಲೀಸ್ ಸಿಬ್ಬಂದಿಗೆ ಪೆಟ್ರೋಲ್ ಬಂಕ್ ಸಿಬ್ಬಂದಿ ಕರೆ ಮಾಡಿದಾಗ ಅವಾಚ್ಯ ಶಬ್ದದಿಂದ ನಿಂದಿಸಿ ಠಾಣೆಗೆ ಕರೆಯಿಸಿಕೊಂಡಿದ್ದು, ಈ ವೇಳೆ ಬೂಟುಕಾಲಿನಿಂದ ಒದ್ದು ಬೆಲ್ಟ್ನಿಂದ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದಾರೆನ್ನಲಾಗಿದೆ. ಪೊಲೀಸಪ್ಪನ ಬೂಟುಗಾಲು ಹೊಡೆತಕ್ಕೆ ಸಿಬ್ಬಂದಿ ಜರ್ಜರಿತನಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ನಂತರ ಠಾಣೆಗೆ ಬಂದು ಜನ ಪ್ರಶ್ನಿಸಿದ್ದಕ್ಕೆ ರಾಜಿ ಸಂಧಾನ ಮಾಡಿಕೊಳ್ಳಲಾಗಿದೆ.