ಜೊಯಿಡಾ: ಯಕ್ಷಗಾನಕ್ಕೆ ಭವ್ಯ ದಿವ್ಯ ಪರಂಪರೆ ಇದೆ. ಎಲ್ಲಿಯವರೆಗೆ ಯಕ್ಷಗಾನ ಇರುತ್ತದೆಯೋ ಅಲ್ಲಿಯವರೆಗೆ ಕನ್ನಡ ಇರುತ್ತದೆ ಎಂದು ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಹೇಳಿದರು.
ಅವರು ತಾಲೂಕಿನ ಯರಮುಖದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಪ್ತಸ್ವರ ಸೇವಾ ಸಂಸ್ಥೆ ಮತ್ತು ಕೀರ್ತಿ ಮಹಿಳಾ ಮಂಡಳ ಇವರ ಸಂಯುಕ್ತ ಆಶ್ರಯದಲ್ಲಿ ಏಳು ದಿನಗಳ ಕಾಲ ನಡೆಯುವ ಗಡಿಯಲ್ಲೊಂದು ಯಕ್ಷಗಾನ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಕ್ಷಗಾನವನ್ನು ಉಳಿಸುವ ಕೆಲಸ ಮಾಡಬೇಕು ಆದರೆ ಕೆಲಸವನ್ನು ಇಂದು ಅಕಾಡೆಮಿ ಮಾಡುತ್ತಿದೆ . ಯಕ್ಷಗಾನ ಎಂದರೆ ಕಾವ್ಯ ವಿಜೃಂಭಿಸುತ್ತದೆ. ಹಲವಾರು ಕಲಾವಿದರು ಯಕ್ಷಗಾನ ಬೆಳೆಸಲು ಸಹಕರಿಸಿದ್ದಾರೆ. ಯಕ್ಷಗಾನ ಹುಟ್ಟಿದ್ದೇ ಉತ್ತರ ಕನ್ನಡದಲ್ಲಿ ಎನ್ನುವುದಕ್ಕೆ ನಮ್ಮಲ್ಲಿ ದಾಖಲೆಗಳಿವೆ. ಸರಕಾರ ಭರತನಾಟ್ಯಕ್ಕೇ ಕೊಡುವಂಥ ಬೆಲೆಯನ್ನು ಯಕ್ಷಗಾನಕ್ಕೇ ನೀಡುತ್ತಿಲ್ಲ. ಎನ್ನುವುದು ಬೇಸರದ ಸಂಗತಿ ಯಕ್ಷಗಾನದಲ್ಲಿ ಎಲ್ಲ ಜಾತಿಯ ಕಲಾವಿದರು ಇರುತ್ತಾರೆ. ಇಲ್ಲಿ ಕಲೆಯೇ ಮುಖ್ಯ. ಇದೊಂದು ಕೂಟಕಲೆ ಒಬ್ಬರಿಂದಾಗುವ ಕಲೆಯಲ್ಲ. ಇಂಥ ಕಲೆಯ ಉಳಿವಿಗೆ ಎಲ್ಲರ ಮನೆಯಲ್ಲೂ ಯಕ್ಷಗಾನದ ಕಂಪು ಪಸರಿಸಬೇಕೆಂದು ಯಕ್ಷಗಾನದ ವಿಶ್ವಕೋಶವನ್ನು ಮಾಡುತ್ತಿರುವ ಬಗ್ಗೆ ಹೇಳಿದರು.
ವಕೀಲ ನಾಗರಾಜ ನಾಯಕ ಮಾತನಾಡಿ, ಯಕ್ಷಗಾನದಂಥ ಕಾರ್ಯಕ್ರಮವನ್ನು ಮಹಿಳೆಯರೇ ಸೇರಿ ಏಳು ದಿನಗಳ ಕಾಲ ನಡೆಸುವುದು ಮಾದರಿಯೇ ಸರಿ. ನಾನು ಕೂಡ ವಕಾಲತ್ತಿನ ಪ್ರಾರಂಭದಲ್ಲಿ ವರ್ಷಗಳ ಕಾಲ ಯಕ್ಷಗಾನ ಪಾತ್ರ ಮಾಡಿದ್ದೇನೆ ನನಗೆ ಅನ್ನ ಕೊಟ್ಟ ಯಕ್ಷಗಾನ ಎಂದಿಗೂ ಮರೆಯುವುದಿಲ್ಲ. ದೇವಸ್ಥಾನಗಳಲ್ಲಿ ಯಕ್ಷಗಾನ ವರ್ಷವಿಡೀ ನಡೆಯುವುದರಿಂದ ಸಾವಿರಾರು ಜನರಿಗೆ ಉದ್ಯೋಗ ಸಿಕ್ಕಿದೆ. ಒಂದು ಕಂಪನಿ ಕೊಡಲು ಸಾಧ್ಯವಿಲ್ಲದ ಕೆಲಸವನ್ನು ಯಕ್ಷಗಾನ ಕಲೆ ನೀಡುತ್ತದೆ . ಆಳುವ ದೊರೆಗಳು ಇದನ್ನು ಗಮನಿಸಿ ಸಂಸ್ಕೃತಿಯನ್ನು ಎತ್ತುವಂತ ಕೆಲಸ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮವನ್ನು ವೇದಮೂರ್ತಿ ಪ್ರಸನ್ನ ಭಟ್ಟರು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಜ್ಯೋತಿಷಿ ವಿನಾಯಕ ಭಟ್ಟರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷೆ ಸುಮಂಗಲಾ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿ 21 ವರ್ಷ ಸಂಸ್ಥೆ ನಡೆದು ಬಂದ ಬಗ್ಗೆ ತಿಳಿಸಿದರು. ಕಾರ್ಯಕ್ರಮವನ್ನು ಸದಾಶಿವ ದೇಸಾಯಿ, ಸಂಧ್ಯಾ ದೇಸಾಯಿ ನಿರ್ವಹಿಸಿದರು. ವೇದಿಕೆಯಲ್ಲಿ ಖ್ಯಾತ ಚಂಡೇವಾದಕ ಕೋಟ ಶಿವಾನಂದ ಅಂಕೋಲಾದ ಯಕ್ಷಗಾನ ಹಾಡುಗಾರ ಆನಂದು ಆಗೇರ ಉಪಸ್ಥಿತರಿದ್ದರು. ನಂತರ ಮಹಿಳೆಯರ ಯಕ್ಷಗಾನ ರಾಜಾ ರುದ್ರಕೋಪ ನಡೆಯಿತು.