ಭಟ್ಕಳ: ಹೊನ್ನಾವರದ ಪರೇಶ್ ಮೇಸ್ತಾ ಸಾವನ್ನು ಕೊಲೆ ಎಂದು ಬಿಂಬಿಸಿ ಅದನ್ನು ಮುಸ್ಲಿಮರ ತಲೆಗೆ ಕಟ್ಟಲು ಬಿಜೆಪಿ ನಡೆಸಿದ ಪ್ರಯತ್ನ ವಿಫಲಗೊಂಡಿದ್ದು, ರಾಜ್ಯದಲ್ಲಿ ನಡೆದ ಯುವಕರ ಕೊಲೆ ಮತ್ತು ಸಾವುಗಳನ್ನು ಬಿಜೆಪಿ ಎನ್ಕ್ಯಾಶ್ ಮಾಡಿಕೊಂಡಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಹೇಳಿದರು.
ಅವರು ಇಲ್ಲಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಕೋಮುಗಲಭೆಗಳನ್ನು ಸೃಷ್ಟಿಸುತ್ತಿದೆ. ಭ್ರಷ್ಟಾಚಾರ ಪರಮಾವಧಿಗೆ ತಲುಪಿದೆ. ನಮ್ಮ ಮುಖ್ಯಮಂತ್ರಿಯನ್ನು ಇನ್ನೊಂದು ರಾಜ್ಯಕ್ಕೆ ಹೋದಾಗ ಭ್ರಷ್ಟ ಮುಖ್ಯಮಂತ್ರಿ ಎಂದು ಜನ ಸ್ವಾಗತಿಸುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಇದು ಅತ್ಯಂತ ನಾಚಿಕೆಗೇಡು, ಬಿಜೆಪಿ ಅತ್ಯಂತ ನೀಚತನದ ರಾಜಕಾರಣಕ್ಕೆ ಇಳಿದಿದ್ದು ಸಾವುಗಳನ್ನು ಕೊಲೆಗಳು ಎಂದು ಬಿಂಬಿಸಿ ಆ ಮೂಲಕ ತಮ್ಮ ಪಕ್ಷವನ್ನು ಬಲಪಡಿಸಿಕೊಳ್ಳಲು ಹಣಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪರೇಶ್ ಮೇಸ್ತಾನ ಕುಟುಂಬಕ್ಕೆ ನ್ಯಾಯ ಕೊಡಿಸುತ್ತೇನೆಂದು ಹೇಳಿದ ಬಿಜೆಪಿಗರು ಅವರ ಕುಟುಂಬವನ್ನು ವಂಚಿಸಿವೆ. ಸಾವನ್ನು ಕೊಲೆಯೆಂದು ಬಿಂಬಿಸಿದವರ ಕುರಿತು ತನಿಖೆಯಾಗಬೇಕು. ಇವರ ಷಡ್ಯಂತ್ರ ಹೊರಬರಬೇಕು ಎಂದು ಆಗ್ರಹಿಸಿದರು. ಸರ್ಕಾರದಲ್ಲಿದ್ದುಕೊಂಡು ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಮಂತ್ರಿಗಳು, ಶಾಸಕರು ತಮ್ಮ ಅಧಿಕಾರವನ್ನು ದುರೂಪಯೋಗ ಪಡಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರು ಎಚ್ಚೆತ್ತುಕೊಂಡು ಪಾಠವನ್ನು ಕಲಿಸಲಿದ್ದಾರೆ ಎಂದ ಅವರು, ರಾಜಕೀಯ ಪಕ್ಷಗಳ ಷಡ್ಯಂತ್ರಗಳಿಗೆ ಬಲಿಯಾಗದೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಪರೇಶ್ ಮೇಸ್ತಾನ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.