ಭಟ್ಕಳ: ಕುಂದಾಪುರ ಠಾಣಾ ವ್ಯಾಪ್ತಿಯ ಬೀಜಾಡಿ ಎಂಬಲ್ಲಿ ಮೊಬೈಲ್ ಅಂಗಡಿ ಕಳ್ಳತನಗೈದ ಆರೋಪಿಯನ್ನು ಕುಂದಾಪುರ ಪೊಲೀಸರು ಕೋರ್ಟಿಗೆ ಹಾಜರುಪಡಿಸಿ ಬಳಿಕ ಹಿರಿಯಡ್ಕ ಜೈಲಿಗೆ ಕೊಂಡೊಯ್ಯುತ್ತಿದ್ದ ವೇಳೆ ಜೈಲಿನ ದ್ವಾರದ ಎದುರು ಪೊಲೀಸರಿಗೆ ಹಲ್ಲೆಗೈದು ಆರೋಪಿ ಪರಾರಿಯಾಗಿದ್ದಾನೆ.
ಭಟ್ಕಳ ನಿವಾಸಿ ಮೊಹಮ್ಮದ್ ರಾಹೀಕ್ (22) ಎಂಬಾತ ಕೆಲ ತಿಂಗಳ ಹಿಂದೆ ಕುಂದಾಪುರ ಠಾಣಾ ವ್ಯಾಪ್ತಿಯ ಬೀಜಾಡಿ ಎಂಬಲ್ಲಿರುವ ಮೊಬೈಲ್ ಅಂಗಡಿಯೊಂದರಿಂದ ವತ್ತುಗಳನ್ನು ಕಳ್ಳತನಗೈದಿದ್ದ. ಈತನನ್ನು ಅ.19ರಂದು ಕುಂದಾಪುರ ಪೊಲೀಸರು ಬಂಧಿಸಿ, ಖಾಸಗಿ ವಾಹನದಲ್ಲಿ ಭದ್ರತೆಯಲ್ಲಿ ಕುಂದಾಪುರ ಕೋರ್ಟಿಗೆ ಹಾಜರುಪಡಿಸಿದ್ದರು. ಕೋರ್ಟ್ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಜಿಲ್ಲಾ ಕಾರಾಗೃಹವಾದ ಹಿರಿಯಡ್ಕ ಜೈಲಿಗೆ ಒಪ್ಪಿಸುವಂತೆ ಆದೇಶ ನೀಡಿತ್ತು. ಅದರಂತೆ ಪೊಲೀಸರು ಕುಂದಾಪುರದಿಂದ ಹೊರಟು ಜಿಲ್ಲಾ ಕಾರಾಗೃಹವಾದ ಹಿರಿಯಡ್ಕ ಸಮೀಪದ ಕಾಜರಗುತ್ತು ಜೈಲಿನ ಮುಖ್ಯ ದ್ವಾರದ ಬಳಿ ತಲುಪಿ ವಾಹನ ನಿಲ್ಲಿಸಿ, ಆರೋಪಿಯನ್ನು ಇಳಿಸುತ್ತಿದ್ದಂತೆ ಆರೋಪಿ ಮೊಹಮ್ಮದ್ ರಾಹೀಕ್‌ನು ಭದ್ರತೆಯಲ್ಲಿದ್ದ ಸಿಬ್ಬಂದಿಯವರನ್ನು ತಳ್ಳಿ ಹಾಕಿ ಹೊಟ್ಟೆಗೆ ಹೊಡೆದು ದೂಡಿ ಹಾಕಿ ಜೈಲಿನ ಪರಿಸರದಲ್ಲಿರುವ ಕಾಡಿನ ಕಡೆ ಓಡಿ ಹೋಗಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.