ಕಾರವಾರ: ಚುನಾವಣೆ ಎದುರಿಸುವವರು ಅವರ ಸ್ವಂತ ಬಲದ ಮೇಲೆ ಚುನಾವಣೆ ಎದುರಿಸಬೇಕು. ಅದನ್ನ ಬಿಟ್ಟು ಬಿಜೆಪಿ ನಾಯಕರು, ಕಾರ್ಯಕರ್ತರು ತಮಗೆ ಬೆಂಬಲ ನೀಡಲಿದ್ದಾರೆ ಎಂದು ಆನಂದ್ ಅಸ್ನೋಟಿಕರ್ ಅವರು ಹೇಳಿಕೆ ನೀಡಿ ಗೊಂದಲ ಮೂಡಿಸಬಾರದು. ಈ ಹೇಳಿಕೆ ಖಂಡನೀಯ ಮತ್ತು ಹಾಸ್ಯಾಸ್ಪದ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ ನಾಯಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ತತ್ವ, ಸಿದ್ಧಾಂತಕ್ಕೆ ಬದ್ಧವಾಗಿರುವ ಪಕ್ಷ. ಪಕ್ಷದ ಕಾರ್ಯಕರ್ತರು ಅಷ್ಟೇ ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. ಪಕ್ಷ ಯಾವ ಜವಾಬ್ದಾರಿಯನ್ನು ಕಾರ್ಯಕರ್ತರಿಗೆ ವಹಿಸುತ್ತದೆಯೋ ಅದನ್ನು ನಿಷ್ಠೆಯಿಂದ ಮಾಡುತ್ತಾರೆ. ಪಕ್ಷದ ನಾಯಕರು, ಕಾರ್ಯಕರ್ತರು, ಜನಪ್ರತಿನಿಧಿಗಳು ತಪ್ಪು ಮಾಡಿದಾಗ ಟೀಕೆ ಮಾಡಲಿ. ಆದರೆ, ಬಿಜೆಪಿ ಸಂಸದರ ಆಶೀರ್ವಾದ ತಮಗಿದೆ, ಬಿಜೆಪಿ ಕಾರ್ಯಕರ್ತರು ತಮ್ಮ ಹಿಂದೆ ಬರುತ್ತಾರೆ ಎಂದು ಆನಂದ್ ಹೇಳಿರುವುದು ಶುದ್ಧ ಸುಳ್ಳು. ಹಲವಾರು ನಾಯಕರ ಆದರ್ಶ ಬಿಜೆಪಿ ಪಕ್ಷಕ್ಕಿದೆ. ಇಂತಹ ಪಕ್ಷದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಪಕ್ಷದ ವಿರುದ್ಧ ನಡೆದುಕೊಳ್ಳುವುದಿಲ್ಲ. ಯಾರನ್ನೋ ಬೆಂಬಲಿಸಲು ನಾವು ದಡ್ಡರಲ್ಲ ಎಂದಿದ್ದಾರೆ.
ಕುಮಟಾದಲ್ಲಿ ಪಕ್ಷದಲ್ಲಿ ಯಾವುದೇ ಬಣಗಳು ಇಲ್ಲ. ತಮಗೆ ಟಿಕೆಟ್ ನೀಡಬೇಕು ಎಂದು ಅಲ್ಲಿ ಯಾರೂ ಹೇಳಿಲ್ಲ. ಇದೂ ಅಲ್ಲದೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷ ಇದುವರೆಗೆ ಯಾರಿಗೂ ಟಿಕೆಟ್ ಘೋಷಣೆ ಮಾಡಿಲ್ಲ. ಟಿಕೆಟ್ ಬೇಕು ಎನ್ನುವ ಅಭಿಲಾಷೆ ಎಲ್ಲರಿಗೂ ಇರುತ್ತದೆ. ಆದರೆ, ಪಕ್ಷ ಯಾರಿಗೆ ಮಣೆ ಹಾಕಲಿದೆಯೋ ಅವರ ಪರ ಎಲ್ಲರೂ ಕೆಲಸ ಮಾಡುತ್ತಾರೆ ಎಂದರು. ಪರೇಶ ಮೇಸ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ `ಬಿ’ ರಿಪೋರ್ಟ್ ಹಾಕಿರುವುದಕ್ಕೆಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಕೇಳಿದ್ದೇನೆ. ಆ ದಾಖಲೆಗಳು ಸಿಕ್ಕ ನಂತರ ವಿವರವಾದ ಮಾಹಿತಿ ನೀಡುವೆ. ಆದರೆ, ಪ್ರಕರಣವನ್ನು ಸಿಬಿಐ ವಹಿಸುವ ಅಂತರದ ಮಧ್ಯೆ ಸಾಕ್ಷ್ಯ ನಾಶಗಳು ಆಗಿವೆ ಎಂದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಅವರು ಶಾಸಕರ ಮೇಲೆ ಆರೋಪಗಳನ್ನು ಮಾಡಲಿ. ಆದರೆ, ಆರೋಪಕ್ಕಾಗಿ ಆರೋಪ ಮಾಡುವುದು ಸಲ್ಲದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ಉಷಾ ಹೆಗಡೆ, ನಯನಾ ನಿಲಾವರ್, ಸುಭಾಷ್ ಗುನಗಿ, ಮನೋಜ್ ಭಟ್ ಇದ್ದರು.