ಕಾರವಾರ: ಸ್ವಾತಂತ್ರ‍್ಯ ನಂತರ ಭವ್ಯ ಭಾರತ ನಿರ್ಮಾಣಕ್ಕೆ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಅಪಾರವಿದೆ ಎಂದು ಉಪನ್ಯಾಸಕಿ ಡಾ. ಭಾಗ್ಯಶ್ರಿ ನಾಯಕ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ನಗರದ ಶಿವಾಜಿ ಬಿ.ಎಡ್ ಕಾಲೇಜಿನಲ್ಲಿ ಆಯೋಜಿಸಿದ್ದ ಡಾ.ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಂಬೇಡ್ಕರ್ ಬಗ್ಗೆ ಓದು ಮುಗಿಯದ ಪುಸ್ತಕ ಎಂದರು.
ಅಂಬೇಡ್ಕರ್ ಅವರು ಬೃಹತ್ ಕಣಜ ಇದ್ದಂತೆ. ಯಾವ ವಿಚಾರವೂ ಗೊತ್ತಿಲ್ಲ ಎನ್ನದ ವ್ಯಕ್ತಿ ಅಂಬೇಡ್ಕರ್ ಆಗಿದ್ದರು. ಭಾರತದ ಅಭಿವೃದ್ಧಿಗೆ ಸಂವಿಧಾನದ ಕೊಡುಗೆಯೇ ಅಪಾರ. ಸಮಾನತೆಯನ್ನ ಹೋಗಿಸಲು ಅವರು ಪಟ್ಟ ಶ್ರಮ ಎಲ್ಲರೂ ನೆನೆಯಬೇಕು ಎಂದರು. ಅಂಬೇಡ್ಕರ್ ಮಾನವತಾವಾದಿಗಳಾಗಿದ್ದರು. ಅವರ ಸಂವಿಧಾನದಿಂದಲೇ ಹಿಂದು ಅಸ್ಪೃಶ್ಯತೆ ನಿವಾರಣೆಯಾಗಿ ದಲಿತರು, ತುಳಿತಕ್ಕೊಳಗಾಗಿದವರು, ಹಿಂದುಳಿದವರು ಮೇಲಕ್ಕೆ ಬಂದಿದ್ದಾರೆ. ಮಹಿಳೆಯ ಏಳಿಗೆಗೆ ಬಾಬಾ ಸಾಹೇಬರ ಕೊಡುಗೆ ಅಪಾರ ಎಂದರು.
ಪತ್ರಕರ್ತ ಸಂದೀಪ್ ಸಾಗರ್ ಮಾತನಾಡಿ, ಅಂಬೇಡ್ಕರ್ ಎಂದರೆ ದಲಿತರು, ಮೀಸಲಾತಿ ಅನ್ನುವ ಕಲ್ಪನೆಯನ್ನ ಬಿಡಬೇಕು. ಎಲ್ಲಾ ವರ್ಗದ ಏಳಿಗೆಗೆ ಅಂಬೇಡ್ಕರ್ ಅವರ ಕೊಡುಗೆ ಇದೆ ಎಂದರು. ಸಮಾಜದಲ್ಲಿ ಶೋಷಿತಕ್ಕೊಳಗಾದ ಸಮಾಜ ಇಂದು ಉನ್ನತ ಹಂತಕ್ಕೆ ಹೋಗುತ್ತಿದೆ ಎಂದರೆ ಅದು ಅಂಬೇಡ್ಕರ್ ಕಾರಣ. ಅಸಮಾನತೆ ಹೋಗಬೇಕು. ಅಸಮಾನತೆ ಹೆಚ್ಚಾದರೆ ದೇಶದ ಪ್ರಗತಿ ಮೇಲೂ ಪರಿಣಾಮ ಬೀರಲಿದ್ದು ಶಿಕ್ಷಕರಾಗುವವರು ಮುಂದೆ ವಿದ್ಯಾರ್ಥಿಗಳಿಗೂ ಅಂಬೇಡ್ಕರ್ ಆದರ್ಶಗಳನ್ನ ತಿಳಿಸಿ ಪಾಲಿಸುವಂತೆ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಶಿವಾನಂದ ನಾಯಕ ಮಾತನಾಡಿ, ಅಂಬೇಡ್ಕರ್ ಹುಟ್ಟದೇ ಇದ್ದಿದ್ದರೆ ಗುಲಾಮಗಿರಿ ಇನ್ನು ಇರುತ್ತಿತ್ತು. ದೇಶಕ್ಕೆ ಸಂವಿಧಾನವನ್ನ ಬರೆದ ಅಂಬೇಡ್ಕರ್ ದೀಪವಾಗಿ ಬೆಳಕನ್ನ ನೀಡಿದರು ಎಂದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ಶಿವಕುಮಾರ ನಾಯಕ, ನವೀನ್ ದೇವರಭಾವಿ, ಸುಮನ್ ಸಾವಂತ್, ಮಾಧವಿ ಗಾಂವಕರ್, ರಾಜೇಶ್ ಭಟ್ ಸೇರಿದಂತೆ ಹಲವರು ಇದ್ದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.