ಕಾರವಾರ: ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನಿಸಿ, ವಿಫಲರಾದ ಪಕ್ಷಾಂತರಿ ಆನಂದ ಅಸ್ನೋಟಿಕರ್ ಹತಾಶೆಯಿಂದ ಮಹಿಳೆಯಾದ ನಮ್ಮ ಶಾಸಕರ ಬಗ್ಗೆ ಕೀಳು ಅಭಿರುಚಿಯ ಮಾತುಗಳನ್ನಾಡಿರುವುದು ಖಂಡನೀಯ ಎಂದು ಬಿಜೆಪಿ ಗ್ರಾಮೀಣ ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಸದಸ್ಯರು ತಿಳಿಸಿದ್ದಾರೆ.
ಆನಂದ್ ಅಸ್ನೋಟಿಕರ್ ಅವರೇ, ನಮ್ಮ ಶಾಸಕರು ಒಬ್ಬ ಮಹಿಳೆ. ಆದರೂ ಇತಿಹಾಸದಲ್ಲಿ ಯಾರೂ ಮಾಡದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ. ತಮ್ಮ ಕೆಲಸದ ಮೂಲಕ ಜನತೆಗೆ ಹತ್ತಿರವಾಗಿದ್ದಾರೆ. ಕ್ಷೇತ್ರದ ಜನತೆ ಅವರನ್ನು ಮನೆಮಗಳಂತೆ ನೋಡುತ್ತಾರೆ. ನೀವು ಬೇಕಾದರೆ ಅವರ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಪಡೆದು ಮಾತನಾಡಿ, ಆದರೆ ಮಹಿಳೆಯ ಕೈಗೊಂಡ ಸಾಧನೆ ನೋಡುವ ಬದಲು ಸೀರೆ, ಬಳೆ ನೋಡುವ ವಿಕೃತ ಮನಸ್ಸು ನಿಮ್ಮದು. ಮಹಿಳೆಯರ ಬಗ್ಗೆ ನಿಮ್ಮ ಕೀಳು ಅಭಿರುಚಿ, ಮಹಿಳೆಯರನ್ನು ನೋಡುವ ದೃಷ್ಟಿಕೋನದ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸಬೇಕಾಗಿ ಬರಬಹುದು.
ಎಲ್ಲಕ್ಕಿಂತ ನನಗೆ ತಾಯಿ ಮುಖ್ಯ ಎಂದು ಹೇಳಿದ್ದೀರಿ. ತಾಯಿ ಎಲ್ಲರಿಗೂ ಮುಖ್ಯ. ನಿಮ್ಮ ತಾಯಿ ನೂರ್ಕಾಲ ಬಾಳಲಿ. ಆದರೆ ನಮ್ಮ ಶಾಸಕರು ಕ್ಷೇತ್ರದ ಜನತೆಯಲ್ಲಿಯೇ ತಂದೆ ತಾಯಿ, ಸಹೋದರ, ಸಹೋದರಿಯರನ್ನು ಕಾಣುತ್ತಾರೆ. ಚಿಕ್ಕ ಮಕ್ಕಳನ್ನೂ ಅಕ್ಕರೆಯಿಂದ ನೋಡುತ್ತಾರೆ. ನಿಮ್ಮ ತಾಯಿ ಅನಾರೋಗ್ಯದಿಂದ ಇರುವಾಗ ಗೋವಾದಲ್ಲಿ ಹಾಗೂ ಕಾರವಾರದಲ್ಲಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಹೀಗಿರುವಾಗ ಇನ್ನೂ 5 ವರ್ಷಗಳ ಕಾಲ ನಿಮ್ಮ ತಾಯಿಯ ಸೇವೆ ಮಾಡಿಕೊಂಡು ಯೋಗಕ್ಷೇಮ ನೋಡಿಕೊಂಡು ಮನೆಯಲ್ಲಿಯೇ ಇರುವ ಭಾಗ್ಯವನ್ನು ನಮ್ಮ ಕ್ಷೇತ್ರದ ಜನತೆ ನಿಮಗೆ ಕರುಣಿಸುತ್ತಾರೆ ಎನ್ನುವ ವಿಶ್ವಾಸ ನಮಗಿದೆ.
ದಾಂಡಿಯಾ, ಹಬ್ಬಗಳು, ನಮ್ಮ ಧಾರ್ಮಿಕ ಆಚರಣೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಜತೆಗೆ ನಮ್ಮ ಶಾಸಕರು ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡರೇ ತಪ್ಪೇನು. ಅವರೇನೂ ನಿಮ್ಮ ಹಾಗೆ ಪಬ್ ಕಲ್ಚರ್ ತಂದಿಲ್ಲ. ಎಳೆಯ ಹುಡುಗರಿಗೆ ಮದ್ಯ ಕುಡಿಸಿ ಅವರ ಜೀವನವನ್ನೇ ಹಾಳು ಮಾಡಿಲ್ಲ. ಕ್ಷೇತ್ರದಲ್ಲಿ ಗೂಂಡಾಗಿರಿಗೆ ಸಪೋರ್ಟ್ ಮಾಡಲಿಲ್ಲ. ಬಿಜೆಪಿಯನ್ನು ಕ್ಷೇತ್ರದಾದ್ಯಂತ ಐತಿಹಾಸಿಕವಾಗಿ ಸಂಘಟಿಸಿ, ಅಭಿವೃದ್ಧಿಯ ಮೂಲಕ ಜನತೆಯ ವಿಶ್ವಾಸ ಗಳಿಸಿದ ಒಬ್ಬ ಮಹಿಳೆಗೆ ಟಿಕೆಟ್ ತಪ್ಪಿಸಲು ನೀವು ಬಿಜೆಪಿ ಹಿರಿಯ ನಾಯಕರನ್ನು ಭೇಟಿಯಾಗಿದ್ದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದೀರಿ. ಟಿಕೆಟ್ ಪಡೆಯಲು ವಿಫಲರಾಗಿದ್ದರಿಂದ ಹತಾಶರಾಗಿ ಮಹಿಳೆಯ ವಿರುದ್ಧ ಕೀಳುಮಟ್ಟದ ಆರೋಪ ಮಾಡುತ್ತಿರುವ ನಿಮಗೆ ಮಹಿಳೆಯರೇ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಸೀರೆ, ಬಳೆ ತೊಡುವ ಕೈಯಲ್ಲಿ ಬ್ಯಾಲೆಟ್ ಪೇಪರ್ ಹಿಡಿಯುವ ಅವಕಾಶವೂ ಮಹಿಳೆಯರಿಗೆ ನೆನಪಿರಲಿ.
ನಮ್ಮ ನಾಯಕಿಯಾದ ರೂಪಾಲಿ ಎಸ್.ನಾಯ್ಕ ಅವರನ್ನು ನೇರವಾಗಿ ಚುನಾವಣೆಯಲ್ಲಿ ಎದುರಿಸುವ ಧೈರ್ಯ ನಿಮಗಿಲ್ಲ. ಅದಕ್ಕೆ ವಾಮಮಾರ್ಗ ಹಿಡಿದಿದ್ದೀರಿ. ಜೊತೆಗೆ ಬಿಜೆಪಿ, ಸಂಘದ ಹಿರಿಯ ಮುಖಂಡರ ಬೆಂಬಲ ತಮಗಿದೆ ಎಂದು ಹೇಳಿಕೊಳ್ಳಲು ಯಾವ ನೈತಿಕತೆ ಇದೆ. ನಿಮ್ಮ ಹಾಗೆ ತತ್ವ, ಸಿದ್ಧಾಂತಗಳನ್ನೆಲ್ಲ ಗಾಳಿಗೆ ತೂರಿ ಕೆಲವೇ ವರ್ಷಗಳಲ್ಲಿ ಎಲ್ಲ ಪಕ್ಷಗಳಲ್ಲೂ ಹೆಜ್ಜೆ ಹಾಕಿ ಎಲ್ಲರಿಂದಲೂ ತಿರಸ್ಕೃತರಾದವರು ನಮ್ಮ ಪಕ್ಷದಲ್ಲಿಲ್ಲ. ನಮ್ಮ ಪಕ್ಷದವರಿಗೆ ರಾಮನ ಮೇಲೆ ಭಕ್ತಿ ಇದೆ. ಆಂಜನೇಯನ ಮೇಲೆ ಶೃದ್ಧೆ ಇದೆ. ಆದರೆ ಹುಚ್ಚು ಹಿಡಿದ ಮಂಗನನ್ನು ಓಡಿಸುವುದು ಹೇಗೆನ್ನುವುದೂ ಗೊತ್ತು. ಎಲ್ಲ ಪಕ್ಷಗಳೂ ಮುಗಿದ ಮೇಲೆ ಬಿಜೆಪಿ ಹಿರಿಯರ ಬೆಂಬಲ ಇದೆ ಎಂದು ಬಿಜೆಪಿಯಲ್ಲಿ ಗೊಂದಲ ಹುಟ್ಟಿಸಿ ಮತಗಳಿಸುವ ನಿಮ್ಮ ದುರಾಲೋಚನೆಗೆ ಯಾರೂ ಸೊಪ್ಪು ಹಾಕುವುದಿಲ್ಲ. ಮುಂದೆ ನೀವೇ ಬಳೆತೊಟ್ಟುಕೊಂಡು ಕುಳಿತಿರಬೇಕಾದ ದಿನಗಳು ಬರಬಹುದು.
ನಮ್ಮ ಶಾಸಕರು ಕಲಿತಿದ್ದು ಕಡಿಮೆ ಎಂದು ವ್ಯಂಗ್ಯವಾಡುವ ನೀವು 5-6 ಭಾಷೆ ಕಲಿತು ಸಾಧಿಸಿದ್ದೇನು. ಎಲ್ಲ ಪಕ್ಷಗಳು, ಮತದಾರರಿಂದ ತಿರಸ್ಕೃತರಾಗಿ ಕ್ಷೇತ್ರದಲ್ಲಿ ಮುಖ ತೋರಿಸಲಾರದೆ ಹೇಡಿಯಂತೆ ಅಡಗಿ ಕುಳಿತುಕೊಳ್ಳುವ ಪರಿಸ್ಥಿತಿ ನಿಮ್ಮದಾಗಿದೆ. ಅಹಂಕಾರ ತಲೆಗೇರಿದರೆ ವ್ಯಕ್ತಿಯ ಪರಿಸ್ಥಿತಿ ಹೇಗಾಗುತ್ತದೆ ಎನ್ನುವುದಕ್ಕೆ ನೀವೇ ನಿದರ್ಶನವಾಗಿದ್ದೀರಿ. ಶಾಸಕರು ಹಣ, ಬಂಗಾರ ಯಾವುದೂ ಶಾಶ್ವತ ಎಂದು ಅಂದುಕೊAಡಿಲ್ಲ. ಅದರ ಪ್ರದರ್ಶನದ ಉದ್ದೇಶವೂ ಅವರದ್ದಲ್ಲ. ಜನಸೇವೆ ಮಾಡಿದಾಗ ಸಿಗುವ ತೃಪ್ತಿ, ಜನರ ವಿಶ್ವಾಸವೇ ಎಲ್ಲಕ್ಕಿಂತ ಮುಖ್ಯ ಅಂದುಕೊAಡವರು. ಇದಾವುದೂ ಗೊತ್ತಿಲ್ಲದ ಆನಂದ್ ಮೈಮೇಲೆ ಇರುವೆ ಬಿಟ್ಟುಕೊಂಡವರAತೆ ವರ್ತಿಸುತ್ತಿದ್ದಾರೆ. ನಿಮ್ಮ ಕುಟುಂಬದ ಸಂಸ್ಕೃತಿಯೇ ಬೇರೆ. ನಮ್ಮ ಮೇಡಂ ಕುಟುಂಬದ ಸಂಸ್ಕೃತಿಯೇ ಬೇರೆ. ನಿಮ್ಮ ಉಪದೇಶಗಳನ್ನು ನೀವೇ ಇಟ್ಟುಕೊಳ್ಳಿ. ಕಳೆದ ಚುನಾವಣೆಯಲ್ಲೇ ಜನತೆ ನಿಮ್ಮ ಶಿಕ್ಷಣ, ಕ್ಷೇತ್ರದಲ್ಲಿ ಮಾಡಿದ ಘನಂದಾರಿ ಕೆಲಸ, ನಿಮ್ಮ ವ್ಯಕ್ತಿತ್ವಗಳನ್ನು ನೋಡಿ ಸರ್ಟಿಫಿಕೇಟ್ ನೀಡಿದ್ದಾರೆ. ಜನರ ತೀರ್ಮಾನಕ್ಕಾದರೂ ಗೌರವ ಕೊಡುವುದನ್ನು ಕಲಿಯಿರಿ.
ಬಿಜೆಪಿ ನಗರ ಹಾಗೂ ಗ್ರಾಮೀಣ ಮಹಿಳಾ ಮೋರ್ಚಾದ ವೃಂದಾ ದಾಮಸಡೇಕರ, ವೈಶಾಲಿ ತಾಂಡೇಲ, ಸುನಿತಾ ಸಾರಂಗ, ವಿಜಯಾ ಅಣವೇಕರ, ಅನ್ನು ಟಾಕೇಕರ, ದೀಪಾಲಿ ನಾಯ್ಕ, ಸುಜಾತಾ ಮಡಿವಾಳ, ವಾಸಂತಿ ಗುನಗಿ, ರೇಷ್ಮಾ ವೆರ್ಣೇಕರ, ಅನಿತಾ ವೆರ್ಣೇಕರ, ಪ್ರಿಯಾ ವೆರ್ಣೇಕರ, ಜಯಶ್ರೀ ಪಾನಕರ, ಶೋಭಾ ಬೈಕೇರಿಕರ, ಅಶ್ವಿನಿ ವಿ.ಮಾಳಸೇಕರ, ಪದ್ಮಾ ಆರ್.ಮಡಿವಾಳ, ತುಷಾ ಟಿ.ನಾಯ್ಕ, ಸವಿತಾ ತಳೇಕರ, ವಿಜಯಾ ಗುನಗಿ, ವಿನಯಾ ಭಟ್, ದೀಪಾ ಅಗೇರ, ಭಾರತಿ ಭೋವಿ, ಲಕ್ಷ್ಮೀಬಾಯಿ ಮಾಳಸೇಕರ, ಸೀಮಾ ನಾಯ್ಕ, ಹೀರಾಬಾಯಿ ಕಳಸ, ಸಿಮರನ್ ವಿ.ನಾಯ್ಕ, ಭಾರತಿ ಬಾಬುರುಕರ, ಕಲಾವತಿ ದುರ್ಗೇಕರ, ಸಾಕ್ಷಿ ಹಾರವಾಡೇಕರ, ಸುಜಾತಾ ಬಾಂದೇಕರ, ಆಶಾ ನಾಯ್ಕ, ಸರಸ್ವತಿ ತಾಂಡೇಲ, ಕಲ್ಪನಾ ನಾಯ್ಕ, ಪೂಜಾ ನಾಯಕ, ಶ್ವೇತಾ ಭಟ್ಕಳ, ವಿಭಾ ನಾಯ್ಕ, ಕಲ್ಪನಾ ಸಾಳಸ್ಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಗ್ರಾಮೀಣ ಮಹಿಳಾ ಮೋರ್ಚಾದ ಸದಸ್ಯರಿಂದ ಅಸ್ನೋಟಿಕರ್ ಮಾತಿಗೆ ವಿರೋಧ
