ಕುಮಟಾ: ವಿದ್ಯಾರ್ಥಿಗಳು ಯೋಗ, ಪ್ರಾಣಾಯಾಮದ ಮೂಲಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಂತೆ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ನರೇಂದ್ರ ಬಿ.ಆರ್. ವಿದ್ಯಾರ್ಥಿಗಳಿಗೆ ಕರೆನೀಡಿದರು.
ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು. ಆಧುನಿಕ ಜೀವನ ಶೈಲಿ ಯಿಂದಾಗಿ ಯುವಕರಲ್ಲಿ ಮಾನಸಿಕ ಅಸ್ವಸ್ಥತೆ ಹೆಚ್ಚುತ್ತಿದೆ.ಕಾರಣ ಉತ್ತಮ ಜೀವನ ಶೈಲಿ ಅಳವಡಿಸಿ ಕೊಳ್ಳುವಂತೆ ಸಲಹೆ ನೀಡಿದರು.
ಮಾನಸಿಕ ಆರೋಗ್ಯದ ಕುರಿತು ಉಪನ್ಯಾಸ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ, ಮಾನಸಿಕ ಆರೋಗ್ಯ ಎನ್ನುವುದು ಜಾಗತಿಕ ಆದ್ಯತೆಯಾಗಬೇಕು. ಸಾಮಾಜಿಕ ಅಸಮಾನತೆ, ಪ್ರೇಮ ವೈಫಲ್ಯ, ಮೊಬೈಲ್ ಗೀಳು ಇವು ಯುವಕರ ಖಿನ್ನತೆಗೆ ಮೂಲ ಕಾರಣವಾಗಿದೆ ಎಂದು ವಿವರಿಸಿದರು. ದುಶ್ಚಟಗಳಿಂದ ದೂರವಿರುವಂತೆ, ಕ್ರೀಡೆ ಮುಂತಾದ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ವಿಜಯಾ ನಾಯ್ಕ ಮಾತನಾಡಿ, ಶಿಸ್ತುಬದ್ಧ ಜೀವನ, ಅಸಹಾಯಕರಿಗೆ ಸಹಾಯ ಮಾಡುವ ಗುಣ ಹಾಗೂ ಸುತ್ತಲಿನವರೊಂದಿಗೆ ಒಳ್ಳೆಯ ಸಂಬಂಧ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಆರ್.ಜಿ.ನಾಯ್ಕ, ಜೀವನದಲ್ಲಿ ಉತ್ತಮ ಸ್ನೇಹಿತರನ್ನು ಗಳಿಸಿಕೊಳ್ಳಿ. ಮಾನಸಿಕ ಒತ್ತಡದಿಂದ ಮುಕ್ತರಾಗಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ನಾಗರಾಜ ಬಿ. ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಂದೇಶ್ ವಂದಿಸಿದರು. ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಮುರುಳಿಮೋಹನ್ ಹಾಗೂ ಬಿಎಚ್‌ಒ ಆರ್.ಜಿ.ನಾಯಕ ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.