ಬೆಂಗಳೂರು: ಸಾಂಪ್ರಾದಾಯಿಕ ಒಳನಾಡು ಮೀನುಗಾರಿಕೆಗೆ ಸರ್ಕಾರ ಸಂಪೂರ್ಣ ಉತ್ತೇಜನ ನೀಡಲಿದೆ ಎಂದು ಮೀನುಗಾರಿಕೆ ಸಚಿವ ಎಸ್.ಅಂಗಾರ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಗುರುವಾರ ಒಳನಾಡು ಮೀನುಗಾರಿಕೆ ಸಮಸ್ಯೆಗಳ ಕುರಿತು ಸಚಿವರು, ಶಾಸಕರು, ಮೀನುಗಾರಿಕೆ ಸಂಘಟನೆಗಳೊಂದಿಗೆ ಸಭೆ ನಡೆಸಿದ ಅವರು, ಸಾಂಪ್ರದಾಯಿಕವಾಗಿ ಮೀನುಗಾರಿಕೆ ಮಾಡಿ ಬದುಕು ಕಟ್ಟಿಕೊಳ್ಳುವ ಮೀನುಗಾರರಿಗೆ ಹಾಗೂ ಒಳನಾಡು ಮೀನುಗಾರಿಕೆಗೆ ಸರ್ಕಾರದಿಂದ ಉತ್ತೇಜನ ನೀಡಲಾಗುವುದು ಎಂದರು.
ಒಳನಾಡು ಮೀನುಗಾರಿಕೆಯಲ್ಲಿ ತೊಡಗಿರುವವರು ಆಯಾ ಪ್ರದೇಶಗಳಲ್ಲಿ ಸಂಘಟಿತರಾಗಿ ಗುಂಪುಗಳಾಗಬೇಕು. ಆಗ ಸರ್ಕಾರದಿಂದ ಸೌಲಭ್ಯ ವಿತರಣೆಗೆ ಅನುಕೂಲವಾಗಲಿದೆ. ಅಲ್ಲದೆ, ಮೀನು ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಕ್ರಮ ವಹಿಸಲಾಗುವುದು ಎಂದರು. ಮೀನುಗಾರರ ಕುಟುಂಬದವರು ತಮ್ಮ ಭೂಮಿಯಲ್ಲಿ ಮೀನುಗಾರಿಕೆಗೆ ಹೊಂಡಗಳನ್ನು ಮಾಡುವುದಾದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹೊಂಡ ನಿರ್ಮಿಸಲು ಅವಕಾಶ ಕಲ್ಪಿಸಲಾಗುವುದು ಅಲ್ಲದೆ ಅವರಿಗೆ ಉಚಿತ ಮೀನುಮರಿಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲೆಗೊಂದು ಮೀನುಗಾರರ ಒಕ್ಕೂಟಗಳನ್ನು ರಚಿಸಿಕೊಳ್ಳುವುದರಿಂದ ಅನುಕೂಲವಾಗಲಿದೆ ಅಲ್ಲದೆ, ಇಲಾಖೆಯಿಂದ ಮೀನುಗಾರಿಕೆಗೆ ತರಬೇತಿ ಹಾಗೂ ಪಂಜರ ಮೀನುಗಾರಿಕೆಗೆ ಉತ್ತೇಜನ ಅಗತ್ಯವಿದೆ ಎಂದರು.
ಮೀನುಗಾರಿಕೆ ಇಲಾಖೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉತ್ತರ ಕರ್ನಾಟಕ ಹಾಗೂ ಬಯಲುಸೀಮೆಯ ಒಳನಾಡು ಮೀನುಗಾರಿಕೆಗೆ ವಿಶೇಷ ಆದ್ಯತೆ ನೀಡಬೇಕು. ಈ ಮೂಲಕ ಸಾಂಪ್ರದಾಯಿಕ ಮೀನುಗಾರರಿಗೆ ಹೆಚ್ಚಿನ ಅನುಕೂಲವಾಗಲಿವೆ ಎಂದರು. ಸಭೆಯಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಮೀನುಗಾರರ ಸಂಘಗಳ ಪದಾಧಿಕಾರಿಗಳು ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡುವ ಸಂಬಂಧ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಶಾಸಕರಾದ ರೂಪಾಲಿ ನಾಯ್ಕ, ಪಿ.ರವಿಕುಮಾರ್, ತಳವಾರ್ ಸಾಬಣ್ಣ, ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ.ಫಾಹಿಮ್, ಮೀನುಗಾರಿಕೆ ಇಲಾಖೆ ನಿರ್ದೇಶಕ ರಾಮಾಚಾರ್ ಮತ್ತಿತರರು ಇದ್ದರು.
ಒಳನಾಡು ಮೀನುಗಾರಿಕೆಗೆ ಸರ್ಕಾರ ಸಂಪೂರ್ಣ ಉತ್ತೇಜನ ನೀಡಲಿದೆ : ಎಸ್.ಅಂಗಾರ
