ಕಾರವಾರ: ತಾಲೂಕಿನ ಕಿನ್ನರದಲ್ಲಿ ಜಮೀನಿನ ಬೇಲಿಗೆ ಅಳವಡಿಸಿದ್ದ ವಿದ್ಯುತ್ ವಾಯರ್ ಗಳಿಂದ ಶಾಕ್ ತಗುಲಿ ಏಳು ಜಾನುವಾರು ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.
ಕಿನ್ನರದ ಸೈರೋಬ ನಾಯ್ಕ್ ಎನ್ನುವವರು ತಮ್ಮ ಎಮ್ಮೆ, ಕೋಣ ಹಾಗೂ ಕರುಗಳನ್ನು ಜಮೀನಿಗೆ ಹೊಡೆದುಕೊಂಡು ಹೋಗುವಾಗ ಶಾಕ್ ತಗುಲಿದ್ದು, ಇದರಿಂದ ಎಮ್ಮೆ, ಕೋಣ ಹಾಗೂ ಕರುಗಳು ಸೇರಿದಂತೆ ಏಳು ಜಾನುವಾರು ಮೃತಪಟ್ಟಿವೆ. ನರಸಿಂಹ ಕಾಣೆಕರ, ದಯಾನಂದ ಕಾಣೆಕರ ಹಾಗೂ ಅನಂದರಾಯ ಕಾಣೆಕರ ಎನ್ನುವವರ ವಿರುದ್ಧ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.
ಇವರು ಜಮೀನಿನ ಪಂಪ್ ಶೆಡ್ಡಿನಿಂದ ಅಕ್ರಮವಾಗಿ ಬೇಲಿಗೆ ವೈಯರ್ ಗಳನ್ನು ಜೋಡಿಸಿ ವಿದ್ಯುತ್ ಹರಿಬಿಟ್ಟಿದ್ದರು. ಇದರಿಂದಾಗಿ ಜಾನುವಾರಿಗೆ ವಿದ್ಯುತ್ ತಗುಲಿದ್ದು, ಘಟನೆಯಿಂದ 2 ಲಕ್ಷ ರೂ. ನಷ್ಟವಾಗಿದೆ ಎಂದು ಪ್ರದೀಪ ವಾಘ ಎನ್ನುವವರು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೇಲಿಗೆ ವಿದ್ಯುತ್ ಸಂಪರ್ಕ; ಏಳು ಜಾನುವಾರು ಸಾವು
