ಹೊನ್ನಾವರ: ಪ್ರಧಾನಮಂತ್ರಿ ಜನಾರೋಗ್ಯ ಯೋಜನೆಯಡಿ ನೋಂದಣಿ ಮಾಡುತ್ತಿರುವ ಆಭಾ ಕಾರ್ಡ್ ಅನ್ನು ಖಾಸಗಿ ಆನ್ಲೈನ್ ಸೆಂಟರ್‌ಗಳು ಜನರ ದಿಕ್ಕು ತಪ್ಪಿಸಿ ಖಾಸಗಿ ಹೆಲ್ತ್ ಐಡಿ ಮಾಡಿ ಹಣ ಪೀಕುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.
ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ನೋಂದಣಿಗೆ ಗ್ರಾಮ ಒನ್ ಹಾಗೂ ಎಸ್‌ಕೆಡಿಆರ್‌ಡಿಪಿ ಸಾಮಾನ್ಯ ಸೇವಾ ಕೇಂದ್ರಕ್ಕೆ ಹೊರತುಪಡಿಸಿ ಬೇರೆ ಯಾವುದಕ್ಕೂ ನೋಂದಣಿಗೆ ಅವಕಾಶ ನೀಡಿಲ್ಲವಾದರೂ ಹೆಲ್ತ್ ಐಡಿ ಮಾಡಿ ಜನರಿಂದ 50- 60 ರೂಪಾಯಿಯವರೆಗೆ ಸುಲಿಗೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ಗ್ರಾಮ ಒನ್ ಕೇಂದ್ರದಲ್ಲಿ ವಿತರಿಸುವ ಕಾರ್ಡ್ಗಳು ಯಾವುದೇ ಮೌಲ್ಯ ಹೊಂದಿಲ್ಲ ಎಂದು ಹೇಳಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಸಾಗುತ್ತಿದೆ.
ಆರೋಗ್ಯ ಕಾರ್ಡ್ಗಳ ಬಗ್ಗೆ ಜನರಲ್ಲಿರುವ ಗೊಂದಲದಿಂದ ಆಯೂಷ್ಮಾನ್ ಕಾರ್ಡ್ಗಳ ನೋಂದಣಿಯಲ್ಲಿ ಜಿಲ್ಲೆಯು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ ಎನ್ನುವುದು ಆಪರೇಟರ್‌ಗಳ ವಾದ. ಒಂದೆಡೆ ಕೈಕೊಡುವ ಸರ್ವರ್ ಇನ್ನೊಂದೆಡೆ ಖಾಸಗಿ ಆನ್ಲೈನ್ ಸೆಂಟರ್‌ಗಳು ಹೆಲ್ತ್ ಐಡಿ ಕಾರ್ಡ್ ಕೊಟ್ಟು ಇದನ್ನೇ ಆಭಾ ಕಾರ್ಡ್ ಎಂದು ಜನರಿಗೆ ವಂಚಿಸಿ ಹಣ ವಸೂಲಿ ಮಾಡಿ ದಿಕ್ಕು ತಪ್ಪಿಸುತ್ತಿದ್ದಾರೆ. ಹೆಲ್ತ್ ಐಡಿ ಮಾಡಿಕೊಂಡಿರುವ ನಾಗರಿಕರು ಅದನ್ನೇ ಆಭಾ ಕಾರ್ಡ್ ಎಂದು ನಂಬಿ ಆಯುಷ್ಮಾನ್ ಕಾರ್ಡ್ ನೋಂದಣಿ ಮಾಡಿಸಿಕೊಳ್ಳದೇ ಇರುವುದು ಕೂಡ ಪ್ರಮುಖ ಕಾರಣವಾಗಿದೆ.
ಕ್ರಮ ಕೈಗೊಳ್ಳದ ಅಧಿಕಾರಿಗಳು: ಖಾಸಗಿ ಆನ್ಲೈನ್ ಸೆಂಟರ್‌ಗಳು ತಮ್ಮ ಅಂಗಡಿಯ ಫಲಕಗಳಿಗೆ ಸರ್ಕಾರದ ಲೋಗೋ ಬಳಸಿರುವುದು ಹಾಗೂ ಗ್ರಾಮ ಒನ್ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಗ್ಗೆ ಕೆಲವು ಗ್ರಾಮ ಒನ್ ಫ್ರಾಂಚೈಸಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಮನವಿ ಮಾಡಿದ್ದರೂ ಅಂಥವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರದ ಯೋಜನೆಯ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಹುಟ್ಟಿಸುವವರ ಅಧಿಕಾರ ವರ್ಗ ಸುಮ್ಮನೆ ಕುಳಿತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ.
ಕುಟುಂಬ ಸರ್ವರ್‌ನಲ್ಲಿ ಮಾಹಿತಿ ಮಾಯ!
ಆಭಾ ಕಾರ್ಡ್ ನೋಂದಣಿ ಮಾಡಿಸಿಕೊಳ್ಳುವಾಗ ಅವರ ಹೆಸರು ಪಡಿತರ ಚೀಟಿಯಲ್ಲಿ ಕಡ್ಡಾಯವಾಗಿ ಇರಬೇಕು ಹಾಗೂ ಮಾಹಿತಿ ಕುಟುಂಬ ಸರ್ವರ್‌ನಲ್ಲಿ ಅಪ್ಡೇಟ್ ಆಗಿರಬೇಕು. ಜಿಲ್ಲೆಯ ಅದೆಷ್ಟೊ ನಾಗರಿಕರ ಮಾಹಿತಿ ಈವರೆಗೂ ಕುಟುಂಬ ಸರ್ವರ್‌ನಲ್ಲಿ ಅಪ್ಡೇಟ್ ಆಗಿಲ್ಲ. ಅವರ ಮಾಹಿತಿಯನ್ನು ಭರ್ತಿ ಮಾಡಲು ಗ್ರಾಮ ಒನ್ ಫ್ರಾಂಚೈಸಿದಾರರಿಗೆ ಲಿಂಕ್ ನೀಡಿದ್ದಾರೆ. ಆದರೆ ಮಾಹಿತಿ ತುಂಬಿದ ಒಂದು ತಿಂಗಳು ಕಳೆದರೂ ಕೂಡ ಅವರ ಹೆಸರು ಮಾತ್ರ ಸರ್ವರ್‌ನಲ್ಲಿ ಅಪ್ಡೇಟ್ ಆಗುತ್ತಿಲ್ಲ. ಇದರಿಂದಾಗಿ ನಾಗರಿಕರಿಂದ ಗ್ರಾಮ ಒನ್ ಫ್ರಾಂಚೈಸಿದಾರರು ಹೇಳಿಸಿಕೊಳ್ಳುವ ಸ್ಥಿತಿ ಬಂದೊದಗಿದೆ.