ದಾಂಡೇಲಿ: ಕಳೆದ ಹತ್ತು ವರ್ಷಗಳಿಂದ ಅಂತ್ಯಕ್ರಿಯೆಯ ಸೇವೆಗೆ ಬಳಕೆಯಾಗುತ್ತಿದ್ದ ನಗರದ ಮುಕ್ತಿ ವಾಹನ ಇದೀಗ ನೇಪಥ್ಯಕ್ಕೆ ಸರಿಯತೊಡಗಿದ್ದು, ಈ ಮುಕ್ತಿವಾಹನದ ಬಗ್ಗೆ ಮುಂದೆ ಕೈಕೊಳ್ಳಬೇಕಾದ ಕ್ರಮಗಳ ಕುರಿತಾಗಿ ಚರ್ಚಿಸಿ, ಸೂಕ್ತ ಕ್ರಮವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮುಕ್ತಿವಾಹಿನಿ ಸೇವಾ ಸಮಿತಿಯ ನೇತೃತ್ವದಲ್ಲಿ ಅ.20ರಂದು ಸಂಜೆ 4 ಗಂಟೆಗೆ ಬಸವೇಶ್ವರ ನಗರದಲ್ಲಿರುವ ಶ್ರೀಹಾಲೇಶ್ವರ ಶಿವಮಂದಿರದಲ್ಲಿ ಸಭೆ ಕರೆಯಲಾಗಿದೆ ಎಂದು ಮುಕ್ತಿವಾಹಿನಿ ಸೇವಾ ಸಮಿತಿಯ ಅಧ್ಯಕ್ಷ ಚಂದ್ರು ವಿ.ಕೋಕಣಿ ಮತ್ತು ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಕ್ಷೀರಸಾಗರ ತಿಳಿಸಿದ್ದಾರೆ.
ಇತ್ತೀಚಿನ ಕೆಲ ತಿಂಗಳುಗಳಿಂದ ನಗರಸಭೆಯ ವತಿಯಿಂದಲೂ ಮುಕ್ತಿ ವಾಹನವೊಂದು ಸೇವೆ ನೀಡುತ್ತಿರುವುದರಿಂದ ನಮ್ಮ ಮುಕ್ತಿವಾಹಿನಿ ಸೇವಾ ಸಮಿತಿಯ ಮುಕ್ತಿವಾಹನವನ್ನು ಸಾರ್ವಜನಿಕರು ಬಳಕೆ ಮಾಡುತ್ತಿಲ್ಲ. ಹೀಗಿರುವಾಗ ಮುಕ್ತಿವಾಹನದ ಬಳಕೆ ಹಾಗೂ ಈ ಬಗ್ಗೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣಾ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸಿ ತಮ್ಮ ಅಮೂಲ್ಯ ಸಲಹೆ, ಸೂಚನೆಗಳನ್ನು ನೀಡಬೇಕೆಂದು ವಿನಂತಿಸಿದ್ದಾರೆ.