ಬೆಂಗಳೂರು: ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ಅಕ್ಟೋಬರ್ 26ರ ಬಲಿಪಾಡ್ಯಮಿ ದಿನದಂದು ‘ಗೋ ಪೂಜೆ’ ನಡೆಸಲು ರಾಜ್ಯ ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ.
ಕಳೆದ ವರ್ಷ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿನ ದೇವಸ್ಥಾನಗಳಲ್ಲಿ ಗೋಪೂಜೆಗೆ ಸೂಚನೆ ನೀಡಲಾಗಿತ್ತು. ಆ ಪದ್ಧತಿಯನ್ನು ಮುಂದುವರಿಸುವ ಉದ್ದೇಶದಿಂದ ಈ ಬಾರಿಯೂ ಆದೇಶ ಜಾರಿಗೊಳಿಸಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.ಆ ದಿನ ಗೋವುಗಳಿಗೆ ಸ್ನಾನ ಮಾಡಿಸಿ ದೇವಾಲಯಕ್ಕೆ ಕರೆತಂದು ಅರಿಶಿನ, ಕುಂಕುಮ, ಹೂಗಳಿಂದ ಅಲಂಕರಿಸಿ ಅಕ್ಕಿ, ಬೆಲ್ಲ, ಬಾಳೆಹಣ್ಣು, ಸಿಹಿ ತಿನಿಸು ಮುಂತಾದ ಗೋಗ್ರಾಸವನ್ನು ಹಸುವಿಗೆ ನೀಡಿ ಪೂಜಿಸಿ ನಮಸ್ಕರಿಸಲಾಗುತ್ತದೆ. ಅಂದು ಸಂಜೆ 5:30ರಿಂದ 6:30ರ ವರೆಗೆ ಗೋಧೂಳಿ ಲಗ್ನದಲ್ಲಿ’ಗೋ ಪೂಜೆ’ ಕಾರ್ಯಕ್ರಮ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವೆ ಜೊಲ್ಲೆ ತಿಳಿಸಿದ್ದಾರೆ.
ಹಿಂದೂ ಧರ್ಮದವರು ಗೋಮಾತೆಯನ್ನು ಪೂಜಿಸಿಕೊಂಡು ಬರುತ್ತಿದ್ದಾರೆ. ಬಲಿಪಾಡ್ಯಮಿಯ ಶುಭ ಸಂದರ್ಭದಲ್ಲಿಗೋವುಗಳಿಗೆ ವಿಶೇಷ ಅಲಂಕಾರದ ಮೂಲಕ ಬೆಲ್ಲ, ಅಕ್ಕಿ, ಸಿಹಿ ತಿಂಡಿಗಳನ್ನು ನೀಡಿ ಪೂಜಿಸಲಾಗುತ್ತದೆ. ಕರ್ನಾಟಕದಲ್ಲಿಯೂ ಗೋಪೂಜೆಯನ್ನು ಬಲಿಪಾಡ್ಯಮಿಯಂದು ನಡೆಸಿಕೊಂಡು ಬರಲಾಗುತ್ತಿದೆ.