ಯಲ್ಲಾಪುರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು ಕಾರ್ಯಕ್ರಮದಡಿ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಪಟ್ಟಣದ ಗಣಪತಿ ಗಲ್ಲಿಯ ಸುಧಾಕರ ನಾಯಕ ಅವರ ಮನೆಗೆ ತೆರಳಿ ಅವರನ್ನು ಗೌರವಿಸಲಾಯಿತು.
ತಾಲೂಕು ಕಸಾಪ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಅವರು ಸುಧಾಕರ ನಾಯಕ ಹಾಗೂ ಭಾವನಾ ನಾಯಕ ದಂಪತಿಯನ್ನು ಗೌರವಿಸಿ ಮಾತನಾಡಿ, ಸಾಧಕರ ಮನೆಗೆ ಹೋಗಿ ಸಾಹಿತ್ಯ ಪರಿಷತ್ತಿನಿಂದ ಅಭಿನಂದಿಸುವ ವಿನೂತನ ಕಾರ್ಯಕ್ರಮ ಇದಾಗಿದೆ. ಕ್ರಿಯಾಶೀಲ ಶಿಕ್ಷಕ ಸುಧಾಕರ ನಾಯಕ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ಬಂದಿರುವುದು ಅಭಿಮಾನದ ಸಂಗತಿ ಎಂದರು.
ಗೌರವ ಸ್ವೀಕರಿಸಿದ ಸುಧಾಕರ ನಾಯಕ ಮಾತನಾಡಿ, ಶ್ರದ್ಧೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವವರಿಗೆ ಗೌರವ ಅರಸಿಕೊಂಡು ಬರುತ್ತದೆ. ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಬಂದಿರುವ ನನಗೆ, ಪರಿಷತ್ತಿನಿಂದ ನೀಡಿದ ಗೌರವ ಸಂತಸ ತಂದಿದೆ ಎಂದರು.
ತಾ.ಪ0 ಇಒ ಜಗದೀಶ ಕಮ್ಮಾರ, ಕ.ಸಾ.ಪ ತಾಲೂಕು ಗೌರವ ಕಾರ್ಯದರ್ಶಿಗಳಾದ ಸಂಜೀವಕುಮಾರ ಹೊಸ್ಕೇರಿ, ಶ್ರೀಧರ ವೈದಿಕ, ಕಾರ್ಯಕಾರಿ ಸಮಿತಿಯ ಸದಸ್ಯ ಕೃಷ್ಣ ಭಟ್ಟ ನಾಯಕನಕೆರೆ, ಸದಸ್ಯರಾದ ಉಲ್ಲಾಸ ಶಾನಭಾಗ, ಪ್ರಸಾದ ಹೆಗಡೆ, ನಾಗೇಶಕುಮಾರ, ಜಯರಾಜ ಗೋವಿ ಮುಂತಾದವರಿದ್ದರು.