ಶಿರಸಿ: ದೇಶದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಟಿಎಸ್ಎಸ್ ನ ಬೈಲಾವ್ ಅಮೆಂಡ್ಮೆಂಟ್ ಸಂಬಂಧಿಸಿ ಬುಧವಾರ ಸಂಘದ ಪ್ರಧಾನ ಕಛೇರಿಯಲ್ಲಿ ನಡೆದ ಗುಪ್ತ ಮತದಾನದಲ್ಲಿ ಈ ಹಿಂದಿನಂತೆಯೇ ‘ಅ’ ವರ್ಗಕ್ಕೆ (ಸಹಕಾರಿ ಸಂಘ ಪ್ರತಿನಿಧಿ) 4 ಸ್ಥಾನ ಇರುವಂತೆ ಸದಸ್ಯರು ಬಹುಮತ ನೀಡಿದ್ದಾರೆ.
ಪ್ರಸ್ತುತ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಆಡಳಿತ ಮಂಡಳಿ ಬಯಸಿದ್ದ ಬದಲಾವಣೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನಲೆಯಲ್ಲಿ ಸದಸ್ಯರಿಂದ ಗುಪ್ತ ಮತದಾನಕ್ಕೆ ಸಂಘದ ಆಡಳಿತ ಮಂಡಳಿ ಅವಕಾಶ ಕಲ್ಪಿಸಲಾಗಿತ್ತು. ಬೈಲಾ ತಿದ್ದುಪಡಿಗೆ ಮತದಾನದ ಅವಕಾಶ ಇದೇ ಮೊದಲ ಬಾರಿಗೆ ಚುನಾವಣೆ ಮೂಲಕ ನಡೆದಿದ್ದು ಜನಸಾಮಾನ್ಯರ ಕುತೂಹಲಕ್ಕೆ ಕಾರಣವಾಗಿತ್ತು.